ಅಮೆರಿಕದ 9 ಮಾಧ್ಯಮ ಸಂಸ್ಥೆಗಳು ‘ವಿದೇಶಿ ಏಜೆಂಟ್‌ಗಳು’: ರಶ್ಯ ಘೋಷಣೆ

Update: 2017-12-05 17:01 GMT

ಮಾಸ್ಕೊ, ಡಿ. 5: ‘ವಾಯ್ಸೊ ಆಫ್ ಅಮೆರಿಕ’ ಸೇರಿದಂತೆ ಅಮೆರಿಕದ ಒಂಬತ್ತು ಮಾಧ್ಯಮ ಸಂಸ್ಥೆಗಳನ್ನು ‘ವಿದೇಶಿ ಏಜಂಟ್’ಗಳೆಂದು ರಶ್ಯದ ಕಾನೂನು ಸಚಿವಾಲಯ ಮಂಗಳವಾರ ಹೆಸರಿಸಿದೆ.

ವಿದೇಶಿ ಮಾಧ್ಯಮ ಸಂಸ್ಥೆಗಳಿಗೆ ಈ ವಿವಾದಾಸ್ಪದ ಹಣೆಪಟ್ಟಿ ಹಚ್ಚಲು ಅವಕಾಶ ನಿಡುವ ಕಾನೂನಿಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಳೆದ ತಿಂಗಳು ಸಹಿ ಹಾಕಿದ್ದರು.

  ಅಮೆರಿಕ ಸರಕಾರ ಹಣ ನೀಡುತ್ತಿರುವ ವಾಯ್ಸಿ ಆಫ್ ಅಮೆರಿಕ ಮತ್ತು ರೇಡಿಯೊ ಫ್ರೀ ಯುರೋಪ್ (ರೇಡಿಯೊ ಲಿಬರ್ಟಿ) ಹಾಗೂ ಅವುಗಳಿಗೆ ಸೇರಿದ ಇತರ ಏಳು ಮಾಧ್ಯಮ ಸಂಸ್ಥೆಗಳು ‘ವಿದೇಶಿ ಏಜಂಟ್‌ನ ಕೆಲಸಗಳನ್ನು ಮಾಡುತ್ತಿವೆ’ ಎಂಬುದಾಗಿ ಪರಿಗಣಿಸಲಾಗಿದೆ ಎಂದು ರಶ್ಯ ಕಾನೂನು ಸಚಿವಾಲಯ ತನ್ನ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

 ರಶ್ಯದ ಹಣದಿಂದ ನಡೆಯುತ್ತಿರುವ ‘ಆರ್‌ಟಿ ಟೆಲಿವಿಶನ್’ನ್ನು ಅಮೆರಿಕದಲ್ಲಿ ‘ವಿದೇಶಿ ಏಜಂಟ್’ ಎಂಬುದಾಗಿ ಈ ಹಿಂದೆ ಹೆಸರಿಸಲಾಗಿರುವುದನ್ನು ಸ್ಮರಿಸಬಹುದಾಗಿದೆ. ಅದಕ್ಕೆ ಪ್ರತೀಕಾರವಾಗಿ ಅಮೆರಿಕದ ಮಾಧ್ಯಮಗಳನ್ನು ಗುರಿಯಾಗಿಸಲು ರಶ್ಯ ಕಳೆದ ತಿಂಗಳು ತರಾತುರಿಯಿಂದ ನೂತನ ಕಾನೂನನ್ನು ಜಾರಿಗೆ ತಂದಿದೆ.

‘ವಿದೇಶಿ ಏಜಂಟ್’ ಎಂಬುದಾಗಿ ಹೆಸರಿಸಲ್ಪಟ್ಟ ಸಂಸ್ಥೆಗಳು ಎಲ್ಲ ದಾಖಲೆಗಳಲ್ಲಿ ತಮ್ಮನ್ನು ಹಾಗೆಂದು ಹೇಳಿಕೊಳ್ಳಬೇಕು ಹಾಗೂ ತಮ್ಮ ಸಿಬ್ಬಂದಿ ನೇಮಕಾತಿ ಮತ್ತು ಹಣಕಾಸಿನ ಬಗ್ಗೆ ತೀವ್ರ ಪರಿಶೀಲನೆಗೆ ಒಳಪಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News