ಹಫೀಝ್ ಸಯೀದ್ ಜೊತೆ ರಾಜಕೀಯ ಮೈತ್ರಿಗೆ ಸಿದ್ಧ: ಮುಶರ್ರಫ್

Update: 2017-12-05 17:04 GMT

ಇಸ್ಲಾಮಾಬಾದ್, ಡಿ. 5: ಪಾಕಿಸ್ತಾನದ ಮುಂದಿನ ಮಹಾ ಚುನಾವಣೆಯಲ್ಲಿ ನಿಷೇಧಿತ ಉಗ್ರ ಸಂಘಟನೆ ಜಮಾಅತ್ ಉದ್‌ ದಾವಾ ಮತ್ತು ಅದರ ಮುಖ್ಯಸ್ಥ ಹಫೀಝ್ ಸಯೀದ್ ಜೊತೆ ರಾಜಕೀಯ ಮೈತ್ರಿ ಏರ್ಪಡಿಸುವ ವಿಷಯದಲ್ಲಿ ತಾನು ಮುಕ್ತ ಮನಸ್ಸು ಹೊಂದಿರುವುದಾಗಿ ಮಾಜಿ ಸರ್ವಾಧಿಕಾರಿ ಜನರಲ್ ಪರ್ವೇಝ್ ಮುಶರ್ರಫ್ ಹೇಳಿದ್ದಾರೆ.

ತಾನು ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯ್ಬಾದ ದೊಡ್ಡ ಬೆಂಬಲಿಗ ಎಂಬುದಾಗಿ ಅವರು ಇತ್ತೀಚೆಗೆ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

‘‘ಈವರೆಗೆ ಯಾವುದೇ ಮಾತುಕತೆ ನಡೆದಿಲ್ಲ. ಆದರೆ, ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳಲು ಅವರು ಬಯಸುವುದಾದರೆ ನಾನು ಅವರನ್ನು ಸರ್ವ ರೀತಿಯಲ್ಲೂ ಸ್ವಾಗತಿಸುತ್ತೇನೆ’’ ಎಂದು ಮುಶರ್ರಫ್ ಹೇಳಿದರು.

ಮುಶರ್ರಫ್ ಇತ್ತೀಚೆಗೆ 23 ಪಕ್ಷಗಳ ನೂತನ ‘ಮಹಾ ಮೈತ್ರಿಕೂಟ’ವೊಂದನ್ನು ರಚಿಸಿರುವುದನ್ನು ಸ್ಮರಿಸಬಹುದಾಗಿದೆ.

‘‘ಅದು ಆಗಬೇಕೆಂದಿದ್ದರೆ ಆಗಿಯೇ ಆಗುತ್ತದೆ’’ ಎಂದು ಪ್ರಸ್ತುತ ದುಬೈನಲ್ಲಿ ಸ್ವಯಂ ದೇಶಭ್ರಷ್ಟ ಜೀವನ ನಡೆಸುತ್ತಿರುವ ಮಾಜಿ ಸೇನಾ ಮುಖ್ಯಸ್ಥ ‘ಆಜ್ ನ್ಯೂಸ್’ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರನಾಗಿರುವ ಹಫೀಝ್ ಸಯೀದ್‌ನನ್ನು ಹಿಡಿದುಕೊಟ್ಟವರಿಗೆ ಅಮೆರಿಕ 1 ಕೋಟಿ ಡಾಲರ್ ಬಹುಮಾನ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News