ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನವನ್ನು ಮಣಿಸಿದ ಸ್ಪೇನ್

Update: 2017-12-05 18:02 GMT

ಭುವನೇಶ್ವರ, ಡಿ.5: ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯಲ್ಲಿ ಮಂಗಳವಾರ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನ ತಂಡವನ್ನು ಸ್ಪೇನ್ 2-1 ಅಂತರದಲ್ಲಿ ಮಣಿಸಿದೆ.

ಪಂದ್ಯದ ಪ್ರಥಮಾರ್ಧದಲ್ಲಿ ಸ್ಪೇನ್‌ಗೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ ಅಂತಿಮ 10 ನಿಮಿಷಗಳಲ್ಲಿ ಎರಡು ಗೋಲು ದಾಖಲಿಸಿದ ಸ್ಪೇನ್ ಗೆಲುವಿನ ದಡ ಸೇರಿತು.

  ಜಾಗತಿಕ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಅರ್ಜೆಂಟೀನ ತಂಡ ನಂ.7 ಸ್ಪೇನ್ ವಿರುದ್ಧ ಗೆಲುವಿನ ಹೋರಾಟದಲ್ಲಿ ಎಡವಿತು. ಪ್ರಥಮಾರ್ಧದಲ್ಲಿ ಸ್ಪೇನ್ ಪಂದ್ಯದ ಮೇಲೆ ಶೇ. 73ರಷ್ಟು ನಿಯಂತ್ರಣ ಸಾಧಿಸಿತ್ತು. ಆರಂಭದಲ್ಲಿ ಉಭಯ ತಂಡಗಳು ಕಠಿಣ ಹೋರಾಟ ನಡೆಸಿದವು. ಪ್ರಥಮಾರ್ಧದಲ್ಲಿ ಅರ್ಜೆಂಟೀನ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲಾರದೆ ಪರದಾಡಿತ್ತು.

  ಎರಡನೆ ಕ್ವಾರ್ಟರ್‌ನ ಕೊನೆಯಲ್ಲಿ ಅರ್ಜೆಂಟೀನದ ಲೂಕಸ್ ವಿಲ್ಲಾ ಚೆಂಡನ್ನು ವಶಕ್ಕೆ ತೆಗೆದುಕೊಂಡು ನಾಯಕ ಮಥಾಯಿಸ್ ಪಾರ್ಡೆಸ್ ಬಳಿ ಕಳುಹಿಸಿದರು. 21ನೇ ನಿಮಿಷದಲ್ಲಿ ಮಥಾಯಿಸ್ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಅರ್ಜೆಂಟೀನ 1-0 ಅಂತರದಲ್ಲಿ ಮೇಲುಗೈ ಸಾಧಿಸಿತು.

ಸ್ಪೇನ್ ತಂಡ ಪಂದ್ಯ ಮುಗಿಯಲು ಕೊನೆಯ 10 ನಿಮಿಷ ಬಾಕಿ ಇದ್ದಾಗ ನಂ.23 ಜೋಸೆಫ್ ರೊಮೆಯೊ ಮತ್ತು ಪಾವು ಕ್ಯುಮಾಡಾ ಗೋಲು ಜಮೆ ಮಾಡುವಲ್ಲಿ ಯಶಸ್ವಿಯಾದರು.

  ಕ್ಯುಮಾಡಾ ಅವರು 50ನೇ ನಿಮಿಷದಲ್ಲಿ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಿದರು. 59ನೇ ನಿಮಿಷದಲ್ಲಿ ಜೋಸೆಫ್ ಅವರು ಗೋಲು ಜಮೆ ಮಾಡಿ ಸ್ಪೇನ್ ತಂಡವನ್ನು ಗೆಲುವಿನ ದಡ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News