ಶಮಿಗೂ ಕಾಡಿದ ದಿಲ್ಲಿ ವಾಯುಮಾಲಿನ್ಯ?

Update: 2017-12-05 18:12 GMT

ಹೊಸದಿಲ್ಲಿ, ಡಿ.5: ಇಲ್ಲಿನ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಭಾರತ- ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ವಾಯು ಮಾಲಿನ್ಯ ಬಹುಚರ್ಚಿತ ವಿಷಯವಾಗಿದೆ. ಉಸಿರಾಟದ ತೊಂದರೆ ಬಗ್ಗೆ ದೂರು ನೀಡಿರುವ ಶ್ರೀಲಂಕಾದ ಬೌಲರ್‌ಗಳು ಮೈದಾನದಲ್ಲಿ ಮಾಸ್ಕ್ ಧರಿಸಿ ಆಡುತ್ತಿದ್ದಾರೆ. ನಾಲ್ಕನೇ ದಿನವಾದ ಮಂಗಳವಾರ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಮೂರು ಓವರ್ ಬೌಲಿಂಗ್ ಮಾಡಿದ ಬಳಿಕ ವಾಂತಿ ಮಾಡಲಾರಂಭಿಸಿದರು.

ಶ್ರೀಲಂಕಾದ ವೇಗಿಗಳಾದ ಸುರಂಗ ಲಕ್ಮಲ್ ಹಾಗೂ ಲಹಿರು ಗಾಮಗೆ ಕೂಡ ಇಂತಹ ಸಮಸ್ಯೆ ಎದುರಿಸಿದ್ದರು. ಗೆಲುವಿಗೆ 410 ರನ್ ಗುರಿ ಪಡೆದ ಶ್ರೀಲಂಕಾ ಎರಡನೇ ಇನಿಂಗ್ಸ್ ಆರಂಭಿಸಿದಾಗ ಭಾರತದ ಬೌಲರ್‌ಗಳು ಮಾಸ್ಕ್ ಧರಿಸದೇ ಮೈದಾನಕ್ಕೆ ಇಳಿದರು. ನಾಲ್ಕನೇ ದಿನದಾಟದಲ್ಲಿ 6ನೇ ಓವರ್‌ನಲ್ಲಿ ವಿಕೆಟ್ ಉಡಾಯಿಸಿದ ಶಮಿ ಎದೆ ಮೇಲೆ ಕೈಇಟ್ಟುಕೊಂಡು ವಾಂತಿ ಮಾಡಲಾರಂಭಿಸಿದರು. ಅವರಿಗೆ ಮೈದಾನದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕರೆದೊಯ್ಯಲಾಯಿತು. ‘‘ಶಮಿ ಆರೋಗ್ಯ ಚೆನ್ನಾಗಿದೆ. ಅವರು ನಾಳೆ ಆಡಲಿದ್ದಾರೆ. ವಾಯು ಮಾಲಿನ್ಯ ದೊಡ್ಡ ವಿಷಯವಲ್ಲ. ಆದರೆ, ಶ್ರೀಲಂಕಾ ಆಟಗಾರರು ವಾಯು ಮಾಲಿನ್ಯದಿಂದ ತೊಂದರೆ ಎದುರಿಸಿದ್ದಾರೆ’’ ಎಂದು ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಹೇಳಿದ್ದಾರೆ. ಶ್ರೀಲಂಕಾ ಆಟಗಾರರು ಕ್ರಿಕೆಟ್‌ನತ್ತ ಗಮನ ನೀಡದೇ ವಿಳಂಬ ತಂತ್ರ ಅನುಸರಿಸುತ್ತಿದ್ದಾರೆ ಎಂದು ವಾಯುಮಾಲಿನ್ಯದ ಬಗ್ಗೆ ದೂರು ನೀಡಿದ್ದ ಶ್ರೀಲಂಕಾ ಆಟಗಾರರ ಬಗ್ಗೆ ಭಾರತ ಆಟಗಾರರು ಮೊನ್ನೆ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News