ಆಸೀಸ್ ನೆಲದಲ್ಲಿ ಮೊದಲ ಬಾರಿ 5 ವಿಕೆಟ್ ಕಬಳಿಸಿದ ಆ್ಯಂಡರ್ಸನ್

Update: 2017-12-05 18:14 GMT

ಅಡಿಲೇಡ್, ಡಿ.5: ಇಂಗ್ಲೆಂಡ್‌ನ ಹಿರಿಯ ಬೌಲರ್ ಜೇಮ್ಸ್ ಆ್ಯಂಡರ್ಸನ್ ಆಸ್ಟ್ರೇಲಿಯ ನೆಲದಲ್ಲಿ ಮೊದಲ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿ ಗಮನ ಸೆಳೆದರು.

15 ಟೆಸ್ಟ್‌ಗಳ ಬಳಿಕ ಆ್ಯಂಡರ್ಸನ್ ಅಮೋಘ ಪ್ರದರ್ಶನ ನೀಡಿದರು. ಅಡಿಲೇಡ್ ಓವಲ್‌ನಲ್ಲಿ ಆಸೀಸ್‌ನ್ನು 2ನೇ ಇನಿಂಗ್ಸ್ ನಲ್ಲಿ ಬೇಗನೆ ಕಟ್ಟಿಹಾಕಲು ಆ್ಯಂಡರ್ಸನ್ ಪ್ರಮುಖ ಪಾತ್ರವಹಿಸಿದರು.

ಸೋಮವಾರ ಅಗ್ರ ಕ್ರಮಾಂಕದ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಹಾಗೂ ಉಸ್ಮಾನ್ ಖ್ವಾಜಾರನ್ನು ಪೆವಿಲಿಯನ್ ಕಳುಹಿಸಿದ್ದ ಆ್ಯಂಡರ್ಸನ್ ಇಂದು ಅದೇ ಪ್ರದರ್ಶನವನ್ನು ಮುಂದುವರಿಸಿ ಪೀಟರ್ ಹ್ಯಾಂಡ್ಸ್ ಕಾಂಬ್(12), ನಥಾನ್ ಲಿಯೊನ್(14) ಹಾಗೂ ಮಿಚೆಲ್ ಸ್ಟಾರ್ಕ್(20) ವಿಕೆಟ್‌ಗಳನ್ನು ಕಬಳಿಸಿ ಐದು ವಿಕೆಟ್ ಗೊಂಚಲು ಪಡೆದರು.

ಆ್ಯಂಡರ್ಸನ್ ಆಸ್ಟ್ರೇಲಿಯದಲ್ಲಿ ಈತನಕ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ 5 ವಿಕೆಟ್ ಗೊಂಚಲು ಪಡೆಯಲು ಸಾಧ್ಯವಾಗಿರಲಿಲ್ಲ. 2010-11ರಲ್ಲಿ 3 ಬಾರಿ ನಾಲ್ಕು ವಿಕೆಟ್ ಕಬಳಿಸಿದ್ದರು.

ಆ್ಯಂಡರ್ಸನ್ 2013ರಲ್ಲಿ ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಮೊದಲ ಆ್ಯಶಸ್ ಟೆಸ್ಟ್‌ನಲ್ಲಿ ಎರಡೂ ಇನಿಂಗ್ಸ್‌ನಲ್ಲಿ ತಲಾ 5 ವಿಕೆಟ್ ಸಹಿತ ಒಟ್ಟು 10 ವಿಕೆಟ್ ಗೊಂಚಲು ಪಡೆದಿದ್ದರು. ಆ್ಯಂಡರ್ಸನ್ 27ಕ್ಕೂ ಅಧಿಕ ಸರಾಸರಿಯಲ್ಲಿ ಒಟ್ಟು 514 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News