ಆಂಗ್ಲರಿಗೆ ಜೋ ರೂಟ್ ಆಸರೆ
ಅಡಿಲೇಡ್, ಡಿ.5: ಆತಿಥೇಯ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ನಡುವೆ ಇಲ್ಲಿ ನಡೆಯುತ್ತಿರುವ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯ ರೋಚಕ ತಿರುವು ಪಡೆದಿದ್ದು, ಐದನೇ ಹಾಗೂ ಅಂತಿಮ ದಿನವಾದ ಬುಧವಾರ ಗೆಲುವು ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ.
ನಾಲ್ಕನೇ ದಿನವಾದ ಮಂಗಳವಾರ ಆಸ್ಟ್ರೇಲಿಯ ತಂಡ ಎರಡನೇ ಇನಿಂಗ್ಸ್‌ನಲ್ಲಿ 138 ರನ್‌ಗೆ ಆಲೌಟಾಯಿತು. ಇಂಗ್ಲೆಂಡ್ ಗೆಲುವಿಗೆ 354 ರನ್ ಗುರಿ ನೀಡಿತು. ಐದು ವಿಕೆಟ್‌ಗಳನ್ನು ಕಬಳಿಸಿದ ಜೇಮ್ಸ್ ಆ್ಯಂಡರ್ಸನ್ ಹಾಗೂ ಔಟಾಗದೆ 67 ರನ್ ಗಳಿಸಿರುವ ಜೋ ರೂಟ್ ದಿನದ ಹೀರೋವಾಗಿ ಹೊರಹೊಮ್ಮಿದ್ದಾರೆ.
ಗೆಲುವಿಗೆ ಕಠಿಣ ಸವಾಲು ಪಡೆದಿರುವ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 4 ವಿಕೆಟ್‌ಗಳ ನಷ್ಟಕ್ಕೆ 176 ರನ್ ಗಳಿಸಿದ್ದು ಅಂತಿಮ ದಿನದಾಟದಲ್ಲಿ ಗೆಲುವಿಗೆ ಕೇವಲ 178 ರನ್ ಗಳಿಸಬೇಕಾಗಿದೆ. ಇಂಗ್ಲೆಂಡ್ ಸುಮಾರು ಏಳು ವರ್ಷಗಳ ಬಳಿಕ ಆಸ್ಟ್ರೇಲಿಯದಲ್ಲಿ ಮೊದಲ ಗೆಲುವು ಸಾಧಿಸುವ ಕನಸು ಕಾಣುತ್ತಿದೆ.
ಮತ್ತೊಂದೆಡೆ, ಆಸ್ಟ್ರೇಲಿಯಕ್ಕೆ ಪಂದ್ಯವನ್ನು ಜಯಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಲು ಇನ್ನೂ 6 ವಿಕೆಟ್‌ಗಳ ಅಗತ್ಯವಿದೆ. ಪಂದ್ಯ ಸಮತೋಲಿತವಾಗಿದ್ದು ಉಭಯ ತಂಡಗಳಿಗೆ ಪಂದ್ಯ ಗೆಲ್ಲುವ ಸಮಾನ ಅವಕಾಶವಿದೆ.
34ನೇ ಅರ್ಧಶತಕ ಬಾರಿಸಿರುವ ನಾಯಕ ಜೋ ರೂಟ್ (ಅಜೇಯ 67, 114 ಎಸೆತ, 9 ಬೌಂಡರಿ) ಹಾಗೂ ಕ್ರಿಸ್ ವೋಕ್ಸ್(ಅಜೇಯ 5) ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಲಿಸ್ಟರ್ ಕುಕ್(16) ಹಾಗೂ ಸ್ಟೋನ್‌ಮನ್(36) ಮೊದಲ ವಿಕೆಟ್‌ಗೆ 53 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭವನ್ನೇ ನೀಡಿದ್ದಾರೆ. ಆದರೆ, 91 ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳು ಪತನಗೊಂಡಿದ್ದವು. ಆಗ 4ನೇ ವಿಕೆಟ್‌ಗೆ 78 ರನ್ ಸೇರಿಸಿದ ರೂಟ್ ಹಾಗೂ ಡೇವಿಡ್ ಮಲಾನ್(29) ತಂಡವನ್ನು ಆಧರಿಸಿದರು.
ಆಸ್ಟ್ರೇಲಿಯದ ಪರ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್(2-65) ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯ 138 ರನ್‌ಗೆ ಆಲೌಟ್: ಇದಕ್ಕೆ ಮೊದಲು 4 ವಿಕೆಟ್‌ಗಳ ನಷ್ಟಕ್ಕೆ 53 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ತಂಡ ಇಂಗ್ಲೆಂಡ್‌ನ ಹಿರಿಯ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್(5-43)ಹಾಗೂ ಕ್ರಿಸ್ ವೋಕ್ಸ್(4-36) ದಾಳಿಗೆ ತತ್ತರಿಸಿ 58 ಓವರ್‌ಗಳಲ್ಲಿ ಕೇವಲ 138 ರನ್‌ಗೆ ಆಲೌಟಾಯಿತು.
ಇಂಗ್ಲೆಂಡ್‌ನ್ನು ಮೊದಲ ಇನಿಂಗ್ಸ್‌ನಲ್ಲಿ 227 ರನ್‌ಗೆ ನಿಯಂತ್ರಿಸಿದ್ದ ಆಸ್ಟ್ರೇಲಿಯ ಫಾಲೋ-ಆನ್ ವಿಧಿಸದೇ 2ನೇ ಇನಿಂಗ್ಸ್ ಆರಂಭಿಸಿತು. ನಾಯಕ ಸ್ಮಿತ್‌ರ ಈ ನಿರ್ಧಾರ ಟೀಕೆಗೆ ಗುರಿಯಾಗಿದೆ. ಆಸೀಸ್ ಪರ ಎರಡನೇ ಇನಿಂಗ್ಸ್‌ನಲ್ಲಿ ಉಸ್ಮಾನ್ ಖ್ವಾಜಾ(20) ಹಾಗೂ ಮಿಚೆಲ್ ಸ್ಟಾರ್ಕ್(20)ಅಗ್ರ ಸ್ಕೋರರ್ ಎನಿಸಿಕೊಂಡರು. ನಾಯಕ ಸ್ಮಿತ್(6) ಸಹಿತ ಉಳಿದವರು ದೊಡ್ಡ ಸ್ಕೋರ್ ಕಲೆ ಹಾಕಲು ವಿಫಲರಾದರು.
ಸಂಕ್ಷಿಪ್ತ ಸ್ಕೋರ್
►ಆಸ್ಟ್ರೇಲಿಯ ಮೊದಲ ಇನಿಂಗ್ಸ್: 442
►ಇಂಗ್ಲೆಂಡ್ ಮೊದಲ ಇನಿಂಗ್ಸ್: 227
►ಆಸ್ಟ್ರೇಲಿಯ ಎರಡನೇ ಇನಿಂಗ್ಸ್:138
(ಉಸ್ಮಾನ್ ಖ್ವಾಜಾ 20, ಮಿಚೆಲ್ ಸ್ಟಾರ್ಕ್ 20, ಆ್ಯಂಡರ್ಸನ್ 5-43, ವೋಕ್ಸ್ 4-36)
►ಇಂಗ್ಲೆಂಡ್ ಎರಡನೇ ಇನಿಂಗ್ಸ್:176/4
(ಜೋ ರೂಟ್ ಅಜೇಯ 67, ಸ್ಟೋನ್‌ಮನ್ 36,ಡೇವಿಡ್ ಮಲಾನ್ 29, ಮಿಚೆಲ್ ಸ್ಟಾರ್ಕ್ 2-65)