ಡಿ.8ರಂದು ವಿಶ್ವ ಏಡ್ಸ್ ದಿನಾಚರಣೆ

Update: 2017-12-06 10:10 GMT

ಮಂಗಳೂರು, ಡಿ.6: ದ.ಕ.ಜಿಲ್ಲಾಡಳಿತ ಮತ್ತು ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಡಿ.8ರಂದು ನಗರದ ಬೆಂದೂರು ಸೈಂಟ್ ಆ್ಯಗ್ನೆಸ್ ಕಾಲೇಜಿನ ಸಭಾಭವನದಲ್ಲಿ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಭಾರ ಡಿಎಚ್‌ಒ ಡಾ.ರತ್ನಾಕರ್ ಹೇಳಿದರು.

ತನ್ನ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ.ಜಸ್ಟೀನಾ ಎ.ಸಿ. ಅಧ್ಯಕ್ಷತೆ ವಹಿಸುವರು. ಅನಿತಾ ಕಿಣಿ ಮತ್ತು ಡಾ.ಕಿಶೋರ್ ಕುಮಾರ್ ಎಂ. ಉಪನ್ಯಾಸ ನೀಡಲಿದ್ದಾರೆ ಎಂದರು.

*ದ.ಕ. ಜಿಲ್ಲೆಯಲ್ಲಿ 2007ರ ಜನವರಿಯಿಂದ 2017ರ ಅಕ್ಟೋಬರ್‌ವರೆಗಿನ ಅಂಕಿಅಂಶಗಳ ಪ್ರಕಾರ 386 ಗರ್ಭಿಣಿಯರು, 9,285 ಮಂದಿ ಇತರರ ಸಹಿತ ಒಟ್ಟು 9,671 ಮಂದಿ ಎಚ್‌ಐವಿ ಸೋಂಕಿತರಿದ್ದಾರೆ. ಈ ವರ್ಷದ ಜನವರಿಯಿಂದ ಅಕ್ಟೋಬರ್‌ವರೆಗೆ 12 ಗರ್ಭಿಣಿಯರು, 500 ಮಂದಿ ಇತರರ ಸಹಿತ 512 ಮಂದಿ ಪಾಸಿಟಿವ್ ಆಗಿ ಪತ್ತೆಯಾಗಿದ್ದಾರೆ. ಇದರಲ್ಲಿ 324 ಪುರುಷರು, 175 ಮಹಿಳೆಯರು ಹಾಗೂ ಒಬ್ಬರು ಮಂಗಳಮುಖಿಯರು ಸೇರಿದ್ದಾರೆ. 512 ಮಂದಿಯ ಪೈಕಿ ಮೂವರು 3ರಿಂದ 14 ವರ್ಷದೊಳಗಿನ ಮಕ್ಕಳಿದ್ದಾರೆ.

ಅದಲ್ಲದೆ ಏಆರ್‌ಟಿ ಕೇಂದ್ರದಲ್ಲಿ 1,958 ಮಂದಿ ಪುರುಷರು, 1,638 ಮಂದಿ ಮಹಿಳೆಯರು, 1 ಟಿಎಸ್ ಅಥವಾ ಟಿಜಿ ಮತ್ತಯ 322 ಮಂದಿ 15 ವರ್ಷದೊಳಗಿನ ಮಕ್ಕಳ ಸಹಿತ 3,919 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ತಿಳಿಸಿದರು.

ಜಿಲ್ಲೆಯ 5 ತಾಲೂಕುಗಳಲ್ಲಿ 20 ಯಕ್ಷಗಾನ ಪ್ರದರ್ಶನದ ಮೂಲಕ ಏಡ್ಸ್ ನಿಯಂತ್ರಣ ತಡೆಗೆ ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೆ ಜಿಲ್ಲೆಯ 64 ಪದವಿ ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್‌ಗಳನ್ನು ಸ್ಥಾಪಿಸಲಾಗಿದೆ. ಎನ್ನೆಸ್ಸೆಸ್ ಕಾರ್ಯಕ್ರಮದ ಮೂಲಕವೂ ಜಾಗೃತಿ ಮೂಡಿಸಲಾಗುತ್ತದೆ. ಜಿಲ್ಲೆಯ 182 ಪ್ರೌಢಶಾಲೆಗಳಲ್ಲೂ ಕೂಡ ಹದಿಹರೆಯದ ಶಿಕ್ಷಣ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News