×
Ad

ಹುತಾತ್ಮ ಯೋಧರ ಮಕ್ಕಳ ಶಿಕ್ಷಣ ಭತ್ತೆ ಬಗ್ಗೆ ಸರಕಾರಕ್ಕೆ ಮನವಿ: ಜ. ರಾವತ್

Update: 2017-12-06 18:54 IST

ಹೊಸದಿಲ್ಲಿ, ಡಿ,7: ಹುತಾತ್ಮ ಯೋಧರ ಮಕ್ಕಳಿಗೆ ನೀಡಲಾಗುತ್ತಿರುವ ಶಿಕ್ಷಣ ಭತ್ತೆಗೆ ಗರಿಷ್ಟ ಮಿತಿ ನಿಗದಿಪಡಿಸಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಸೇನಾಪಡೆಯ ಮುಖ್ಯಸ್ಥ ಜ ಬಿಪಿನ್ ರಾವತ್ ತಿಳಿಸಿದ್ದಾರೆ.

ಈ ವಿಷಯವನ್ನು ರಕ್ಷಣಾ ಸಚಿವರ ಗಮನಕ್ಕೆ ತರಲಾಗಿದೆ. ಸೇನಾಪಡೆಯ ಸಿಬ್ಬಂದಿಯ ಯೋಗಕ್ಷೇಮದ ಬಗ್ಗೆ ಅವರೂ ಕಳಕಳಿ ವ್ಯಕ್ತಪಡಿಸಿದ್ದು ಆದ್ಯತೆಯ ಮೇರೆಗೆ ಈ ಪ್ರಕರಣವನ್ನು ಗಮನಿಸಲಾಗುವುದು ಎಂದು ತಿಳಿಸಿರುವುದಾಗಿ ರಾವತ್ ಹೇಳಿದರು.

ಹುತಾತ್ಮ ಯೋಧರ ಅಥವಾ ಕರ್ತವ್ಯದ ಸಂದರ್ಭ ಅಂಗವೈಕಲ್ಯಕ್ಕೆ ಒಳಗಾಗುವ ಯೋಧರ ಮಕ್ಕಳಿಗೆ ನೀಡುವ ಶಿಕ್ಷಣ ಭತ್ತೆಯನ್ನು ತಿಂಗಳಿಗೆ ಗರಿಷ್ಟ 10,000 ರೂ. ಎಂದು ರಕ್ಷಣಾ ಇಲಾಖೆ ನಿಗದಿಪಡಿಸಿ ಈ ಬಗ್ಗೆ ಕಳೆದ ಜುಲೈಯಲ್ಲಿ ಆದೇಶ ಜಾರಿಗೊಳಿಸಿದೆ. ರಕ್ಷಣಾ ಪಡೆಯ ಮೂರೂ ವಿಭಾಗದ ಮುಖ್ಯಸ್ಥರನ್ನು ಒಳಗೊಂಡಿರುವ ಸಿಬ್ಬಂದಿ ಸಮಿತಿಯ ಅಧ್ಯಕ್ಷ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬ ಕೂಡಾ ಈ ಕುರಿತು ಸರಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಗರಿಷ್ಟ ಮಿತಿ ಇಲ್ಲದ ಹಿಂದಿನ ನಿಯಮವನ್ನೇ ಮುಂದುವರಿಸಬೇಕೆಂದು ಬೇಡಿಕೆ ಕೇಳಿಬಂದಿದೆ.

ಈ ಮಧ್ಯೆ ಅಹ್ಮದಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಈ ಪ್ರಕರಣದ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News