ಸಿಎಂ ಆದಿತ್ಯನಾಥ್‌ರನ್ನು ‘ವರಿಸಿದ’ ಅಂಗನವಾಡಿ ಕಾರ್ಯಕರ್ತೆ!
ಲಕ್ನೋ, ಡಿ.6: ಪ್ರತಿಭಟನೆ ವಿನೂತನ ರೀತಿಯಲ್ಲಿ ನಡೆದರೆ ಎಲ್ಲರ ಗಮನ ಸೆಳೆಯುತ್ತದೆ ಎಂಬುದನ್ನು ಮನಗಂಡಿರುವ ಉತ್ತರಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ನಡೆಸಿರುವ ಪ್ರತಿಭಟನೆಯಂತೂ ಅತ್ಯಂತ ವಿಶಿಷ್ಟವಾಗಿದೆ. ಮಂತ್ರೋಚ್ಛಾರ ಮತ್ತು ಡೋಲು ವಾದನದ ಮಧ್ಯೆಯೇ ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಫೋಟೋಗೆ ಮಹಿಳೆಯೊಬ್ಬಳು ಹೂಮಾಲೆ ತೊಡಿಸುವ ಮೂಲಕ ಅವರನ್ನು ವಿವಾಹವಾಗಿದ್ದಾಳೆ! ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಸುದೀರ್ಘಾವಧಿಯಿಂದ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರವನ್ನು ಒತ್ತಾಯಿಸುತ್ತಾ ಬಂದಿದ್ದರು. ಆದರೆ ಸರಕಾರ ಮಾತ್ರ ಇವರ ಬೇಡಿಕೆಗಳ ಬಗ್ಗೆ ಗಮನ ಹರಿಸಲೇ ಇಲ್ಲ. ಆದ್ದರಿಂದ ಸೀತಾಪುರದಲ್ಲಿ ಮಂಗಳವಾರ ಮಹಿಳಾ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ನೀತು ಸಿಂಗ್ ನೇತೃತ್ವದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಯಿತು. ಸಂಘದ ಸದಸ್ಯೆಯರ ಸಮ್ಮುಖದಲ್ಲಿ ನೀತು ಸಿಂಗ್ ಮುಖ್ಯಮಂತ್ರಿ ಆದಿತ್ಯನಾಥ್ ಫೋಟೋಗೆ ಹೂಮಾಲೆ ಹಾಕಿ ಅವರನ್ನು ‘ವಿವಾಹ ಆಗಿರುವುದಾಗಿ’ ಘೋಷಿಸಿದರು.
ಈ ಮದುವೆಯಿಂದ ರಾಜ್ಯದ ಸುಮಾರು 4 ಲಕ್ಷ ಕಾರ್ಯಕರ್ತೆಯರಿಗೆ ಅನುಕೂಲವಾಗಲಿದೆ ಎಂದಿರುವ ನೀತು ಸಿಂಗ್, ಮುಖ್ಯಮಂತ್ರಿ ಆದಿತ್ಯನಾಥ್ ಶುಕ್ರವಾರ ಸೀತಾಪುರಕ್ಕೆ ಆಗಮಿಸಲಿದ್ದು ಅವರೊಂದಿಗೆ ಲಕ್ನೋಗೆ ತೆರಳಲು ತಾನು ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ.
ಇನ್ನೂ ಸರಕಾರ ತಮ್ಮ ಬೇಡಿಕೆಗಳ ಬಗ್ಗೆ ನಿರ್ಲಕ್ಷದ ಧೋರಣೆ ಮುಂದುವರಿಸಿದರೆ ತಾನು ಕುದುರೆಯ ಮೇಲೇರಿ ಮುಖ್ಯಮಂತ್ರಿಯ ಭೇಟಿಗಾಗಿ ತೆರಳಲಿದ್ದೇನೆ ಎಂದು ನೀತು ಹೇಳಿದ್ದಾರೆ. ಈ ವಿವಾಹ ಕಾರ್ಯಕ್ರಮದ ಒಂದು ಭಾಗವಾಗಿದ್ದಕ್ಕೆ ತನಗೆ ಸಂತಸವಾಗಿದೆ ಎಂದು ತಮ್ಮ ಮುಖದ ಮೇಲೆ ಆದಿತ್ಯನಾಥ್ ಚಿತ್ರವನ್ನು ಧರಿಸಿದ್ದ ನೀತು ಸಿಂಗ್ ಹೇಳಿದರು.
ತಮ್ಮ ಬೇಡಿಕೆಗಳನ್ನು ಈಡೇರಿಸಲು ರಾಜ್ಯದಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡ ಬಿಜೆಪಿ ಸರಕಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು 4 ತಿಂಗಳಾವಧಿಯ ಗಡುವು ನೀಡಿದ್ದರು. ಆದರೆ ಎಂಟು ತಿಂಗಳು ಕಳೆದರೂ ಸರಕಾರ ಈ ಕುರಿತು ಗಮನ ಹರಿಸಿಲ್ಲ. ಈ ಹಿಂದೆ ಲಕ್ನೊದಲ್ಲಿ ಪ್ರತಿಭಟನೆ ನಡೆಸಿದ್ದಾಗ ತಮ್ಮ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು ಎಂದೂ ಅಂಗನವಾಡಿ ಕಾರ್ಯಕರ್ತೆಯರು ಆರೋಪಿಸಿದ್ದಾರೆ.