×
Ad

ಕರ್ನಾಟಕ ಹೈಕೋರ್ಟ್‌ಗೆ ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು

Update: 2017-12-06 21:49 IST

ಹೊಸದಿಲ್ಲಿ, ಡಿ.6: ಐವರು ಹಿರಿಯ ವಕೀಲರನ್ನು ಕರ್ನಾಟಕ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳನ್ನಾಗಿ ನೇಮಿಸುವಂತೆ ಸುಪ್ರೀಂಕೋರ್ಟ್‌ನ ಕೊಲಿಜಿಯಂ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ.

ಪ್ರಧಾನ ನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ ಹಾಗೂ ರಂಜನ್ ಗೊಗೋಯಿ ಅವರನ್ನೊಳಗೊಂಡಿರುವ ತ್ರಿಸದಸ್ಯ ಕೊಲೊಜಿಯಂ ಕರ್ನಾಟಕ, ಮದ್ರಾಸ್ ಹಾಗೂ ಕೋಲ್ಕತಾ ಹೈಕೋರ್ಟ್‌ಗೆ ಒಟ್ಟು 19 ನ್ಯಾಯಮೂರ್ತಿಗಳನ್ನು ನೇಮಿಸುವಂತೆ ಶಿಫಾರಸು ಮಾಡಿದೆ.

 ಕೃಷ್ಣ ಎಸ್. ದೀಕ್ಷಿತ್, ರಾಮಕೃಷ್ಣ ದೇವದಾಸ್, ಬಿ.ಎಂ.ಶ್ಯಾಮ್‌ಪ್ರಸಾದ್, ಶಂಕರ್ ಗಣಪತಿ ಪಂಡಿತ್ ಮತ್ತು ಎಸ್.ಸುನಿಲ್‌ದತ್ ಯಾದವ್ ಅವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಶಿಫಾರಸು ಮಾಡಲಾಗಿದೆ. ಕೃಷ್ಣ ದೀಕ್ಷಿತ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರ್. ದೇವದಾಸ್ ಮತ್ತು ಬಿ.ಎಂ.ಶ್ಯಾಮ್‌ಪ್ರಸಾದ್ ಹಿರಿಯ ವಕೀಲರಾಗಿದ್ದಾರೆ. ಸುನಿಲ್‌ದತ್ ಯಾದವ್ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಪದವೀಧರರಾಗಿದ್ದಾರೆ.

  ಹೈಕೋರ್ಟ್ ಶಿಫಾರಸ್ಸು ಮಾಡಿದ್ದ 10 ಹೆಸರಿನಲ್ಲಿ ಐವರು ಮಾತ್ರ ಸೂಕ್ತ ಅರ್ಹತೆ ಹೊಂದಿರುವುದಾಗಿ ಸುಪ್ರೀಂಕೋರ್ಟ್ ಕೊಲಿಜಿಯಂ ಅಭಿಪ್ರಾಯ ಪಟ್ಟಿದೆ. ಜಿ.ಎಸ್.ಕಣ್ಣೂರ್, ಕೆ.ಅರವಿಂದ್ ಕಾಮತ್, ಕೆ.ಎನ್.ಫಣೀಂದ್ರ ಮತ್ತು ಮಹೇಶನ್ ನಾಗಪ್ರಸನ್ನರ ಹೆಸರನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ವಾಪಾಸು ಕಳಿಸಲಾಗಿದೆ. ಕೆ.ಸಿ.ಕೇಶವಮೂರ್ತಿ ಪದೋನ್ನತಿಗೆ ಅರ್ಹರಲ್ಲ ಎಂದು ಕೊಲಿಜಿಯಂ ಪರಿಗಣಿಸಿದೆ.

  ಶಿಫಾರಸು ಮಾಡಲಾಗಿರುವ ಕೆಲವರ ವಿರುದ್ಧ ದೂರುಗಳನ್ನು ಕೊಲಿಜಿಯಂಗೆ ಸಲ್ಲಿಸಲಾಗಿದೆ. ಆದರೆ ಇದು ಆಧಾರರಹಿತ ಆರೋಪ ಎಂದು ಗುಪ್ತಚರ ಸಂಸ್ಥೆಗಳ ವರದಿ ತಿಳಿಸಿದೆ. ಪ್ರತಿಯೊಬ್ಬ ಅಭ್ಯರ್ಥಿಯ ಅರ್ಹತೆಯನ್ನು ಪರಿಗಣಿಸಿ, ಸಮಾಜದ ಎಲ್ಲಾ ವರ್ಗಗಳಿಗೂ ಸೂಕ್ತ ಪ್ರಾತಿನಿಧ್ಯ ದೊರಕಿಸಿಕೊಡಲು ಗರಿಷ್ಠ ಪ್ರಯತ್ನ ನಡೆಸಲಾಗಿದೆ ಎಂದು ಕೊಲಿಜಿಯಂ ತಿಳಿಸಿದೆ . ಕೇಂದ್ರ ಸರಕಾರ ಒಪ್ಪಿಗೆ ನೀಡಿದರೆ ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಸಂಖ್ಯೆ 32ಕ್ಕೆ ಇಳಿಯಲಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News