ರಾಷ್ಟ್ರೀಯ ಕ್ರೀಡಾ ವೀಕ್ಷಕ ಸ್ಥಾನ ತ್ಯಜಿಸಿದ ಸುಶೀಲ್ ಕುಮಾರ್

Update: 2017-12-06 18:24 GMT

ಹೊಸದಿಲ್ಲಿ, ಡಿ.6: ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಜಯಿಸಿರುವ ಕುಸ್ತಿಪಟು ಸುಶೀಲ್‌ಕುಮಾರ್ ರಾಷ್ಟ್ರೀಯ ಕ್ರೀಡಾ ವೀಕ್ಷಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸ್ಟಾರ್ ಬಾಕ್ಸರ್ ಎಂಸಿ ಮೇರಿಕೋಮ್ ಹೆಜ್ಜೆಯನ್ನ್ನು ಅನುಸರಿಸಿದ್ದಾರೆ.

 ಈವರ್ಷದ ಮಾರ್ಚ್‌ನಲ್ಲಿ ಕ್ರೀಡಾ ಸಚಿವ ವಿಜಯ್ ಗೋಯೆಲ್ 34ರ ಹರೆಯದ ಸುಶೀಲ್ ಸಹಿತ 12 ಮಂದಿಯನ್ನು ರಾಷ್ಟ್ರೀಯ ಕ್ರೀಡಾ ವೀಕ್ಷಕರನ್ನಾಗಿ ನೇಮಕ ಮಾಡಿದ್ದರು.

‘‘ಕುಸ್ತಿಪಟು ಸುಶೀಲ್‌ಕುಮಾರ್ ಹಾಗೂ ಬಾಕ್ಸರ್ ಎಂಸಿ ಮೇರಿಕೋಮ್ ರಾಷ್ಟ್ರೀಯ ಕ್ರೀಡಾ ವೀಕ್ಷಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಬ್ಬರು ಕ್ರೀಡಾಪಟುಗಳು ಕುಸ್ತಿ(ಪುರುಷರ ವಿಭಾಗ) ಹಾಗೂ ಬಾಕ್ಸಿಂಗ್‌ನಲ್ಲಿ(ಮಹಿಳಾವಿಭಾಗ)ಸಕ್ರಿಯರಾಗಿದ್ದಾರೆ. ಹುದ್ದೆಯಲ್ಲಿ ಮುಂದುವರಿದರೆ ಸ್ವಹಿತಾಸಕ್ತಿ ಸಂಘರ್ಷ ಎದುರಾಗುವ ಭೀತಿ, ಅಥ್ಲೀಟ್‌ಗಳ ಕ್ರೀಡಾ ಸಂಪ್ರದಾಯಕ್ಕೆ ಮನ್ನಣೆ ನೀಡಿ ರಾಜೀನಾಮೆ ನೀಡಿದ್ದಾರೆ. ಯುವಜನ ಹಾಗೂ ಕ್ರೀಡಾ ಸಚಿವಾಲಯ ಈ ಇಬ್ಬರ ರಾಜೀನಾಮೆ ಸ್ವೀಕರಿಸಲಿದೆ’’ ಎಂದು ಕ್ರೀಡಾ ಸಚಿವಾಲಯ ಬುಧವಾರ ತಿಳಿಸಿದೆ.

ಸುಶೀಲ್ ಹಾಗೂ ಮೇರಿ ಕೋಮ್ ಸೇವೆಯನ್ನು ಶ್ಲಾಘಿಸಿರುವ ಕ್ರೀಡಾ ಸಚಿವ ರಾಜ್ಯವರ್ಧನ್ ರಾಥೋಡ್, ಸರಕಾರ ಮುಂದೆಯೂ ಇವರಿಂದ ಸಲಹೆ-ಸೂಚನೆ ಪಡೆಯಲಿದೆ ಎಂದಿದ್ದಾರೆ.

ಸಕ್ರಿಯ ಕ್ರೀಡಾಳುಗಳನ್ನು ವೀಕ್ಷಕ ಹುದ್ದೆಗೆ ಪರಿಗಣಿಸುವುದಿಲ್ಲ ಎಂದು ರಾಥೋಡ್ ಸ್ಪಷ್ಟಪಡಿಸಿದ ಬೆನ್ನಿಗೇ ಮೇರಿ ಕೋಮ್ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News