ಆರ್ಟ್‌ಆಫ್ ಲಿವಿಂಗ್ ಕಾರ್ಯಕ್ರಮದಿಂದ ಯಮುನೆಯ ದಡಕ್ಕೆ ಹಾನಿ
ಹೊಸದಿಲ್ಲಿ, ಡಿ.7: ಕಳೆದ ವರ್ಷ ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ ವಿಶ್ವ ಸಾಂಸ್ಕೃತಿಕ ಉತ್ಸವದಿಂದಾಗಿ ಯಮುನಾ ನದಿಯ ತಪ್ಪಲಿನಲ್ಲಿರುವ ಪ್ರವಾಹಪ್ರದೇಶಕ್ಕೆ ಅಪಾರ ಹಾನಿಯಾಗಿದೆಯೆಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಗುರುವಾರ ತಿಳಿಸಿದೆ.
ಆರ್ಟ್ ಆಫ್ ಲಿವಿಂಗ್‌ಗೆ ಈ ಮೊದಲು ವಿಧಿಸಲಾಗಿದ್ದ 5ಕೋಟಿ ರೂ. ದಂಡದ ಮೊತ್ತವನ್ನು ಅದು ಪಾವತಿಸಿದ ಬಳಿಕ ದಿಲ್ಲಿ ಅಭಿವೃದ್ದಿ ಪ್ರಾಧಿಕಾರವು, ಯುಮನೆಯ ಪ್ರವಾಹಪ್ರದೇಶದ ಪುನರುಜ್ಜೀವನ ಕಾಮಗಾರಿಯನ್ನು ನಡೆಸಬೇಕೆಂದು ನ್ಯಾಯಾಧೀಕರಣವು ತಿಳಿಸಿದೆ.
ಯಮುನೆಯ ತಪ್ಪಲಲ್ಲಿ ಆಯೋಜಿಸಲಾದ ಕಾರ್ಯಕ್ರಮದಿಂದ ಪರಿಸರಕ್ಕೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಹಸಿರು ನ್ಯಾಯಾಧೀಕರಣವು, ಆರ್ಟ್ ಆಫ್‌ಲಿವಿಂಗ್‌ಗೆ 5 ಕೋಟಿ ರೂ. ದಂಡವನ್ನು ವಿಧಿಸಿತ್ತು. ಆದಾಗ್ಯೂ,ಈ ದಂಡದ ಮೊತ್ತವು ಇನ್ನೂ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಪಾವತಿಸಲಾಗಿಲ್ಲವೆಂದು ತಿಳಿದುಬಂದಿದೆ.
ಪರಿಸರವನ್ನು ಕಾಪಾಡುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸಲು ಡಿಡಿಎ ವಿಫಲವಾಗಿದೆ. ಯುಮುನಾ ಪ್ರವಾಹಪ್ರದೇಶಕ್ಕೆ ಉಂಟಾಗಿರುವ ಹಾನಿಯನ್ನು ಅದು ಅಂದಾಜಿಸಿ,ಪ್ರದೇಶದ ಪುನರುಜ್ಜೀವನ ಕಾಮಗಾರಿಯನ್ನು ಕೈಗೊಳ್ಳುವಂತೆ ಅದು ತಿಳಿಸಿದೆ.
ಯಮುನೆಯ ಪ್ರವಾಹಪ್ರದೇಶದ ಪುನರುಜ್ಜೀವನಕ್ಕೆ 10 ವರ್ಷಗಳೇ ಬೇಕಾಗಲಿದ್ದು, 13.29 ಕೋಟಿ ರೂ. ವೆಚ್ಚವಾಗಲಿದೆಯೆಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ತಜ್ಞರ ಸಮಿತಿ ಕಳೆದ ಎಪ್ರಿಲ್ ನಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಿತ್ತು.
ಮೂರು ದಿನಗಳ ಕಾಲ ನಡೆದ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಿಂದಾಗಿ ಯಮುನಾ ಪ್ರವಾಹಪ್ರದೇಶವು ಮೃಗ, ಪಕ್ಷಿ ಹಾಗೂ ಕೀಟಗಳು ಮತ್ತು ಮಣ್ಣಿನಲ್ಲಿ ವಾಸಿಸುವ ಜೀವರಾಶಿಗೆ ಆಶ್ರಯದಾಣವಾದ ಮರಗಳು, ಪೊದೆಗಳು,ಎತ್ತರದ ಹುಲ್ಲುಗಳು, ಜಲಸಸ್ಯಗಳಂತಹ ಪ್ರಾಕೃತಿಕ ಸಸ್ಯಸಂಕುಲವನ್ನು ಕಳೆದುಕೊಂಡಿದೆಯೆಂದು ಸಮಿತಿಯ 47 ಪುಟಗಳ ವರದಿ ತಿಳಿಸಿದೆ.