ಅಫ್ಘಾನಿಸ್ತಾನದ ಶಹಝಾದ್‌ಗೆ 1 ವರ್ಷ ನಿಷೇಧ

Update: 2017-12-07 17:51 GMT

ಕಾಬೂಲ್, ಡಿ.7:ನಿಷೇಧಿತ ಉದ್ದೀಪನ ದ್ರವ್ಯ ಸೇವನೆ ಆರೋಪದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಅಫ್ಘಾನಿಸ್ತಾನದ ವಿಕೆಟ್‌ಕೀಪರ್ ಮುಹಮ್ಮದ್ ಶಹಝಾದ್‌ಗೆ 12 ತಿಂಗಳ ನಿಷೇಧ ವಿಧಿಸಿದೆ. 29ರ ಹರೆಯದ ಶಹಝಾದ್ ಜನವರಿಯಲ್ಲಿ ದುಬೈನಲ್ಲಿ ಉದ್ದೀಪನಾ ಮದ್ದು ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಅವರು ನೀಡಿರುವ ರಕ್ತ ಮಾದರಿಯಲ್ಲಿ ಅಸ್ತಮಾ ನಿವಾರಣೆಗೆ ಬಳಸುವ ಔಷಧಿ ಸೇವಿಸಿರುವುದು ಪತ್ತೆಯಾಗಿತ್ತು. ಈ ದ್ರವ್ಯ ವಿಶ್ವ ಉದ್ದೀಪನಾ ತಡೆ ಘಟಕದ(ವಾಡಾ) ನಿಷೇಧಿತ ಪಟ್ಟಿಯಲ್ಲಿದೆ.

   ಶಹಝಾದ್ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿರುವ ಕಾರಣ ಅವರು ತಪ್ಪಿತಸ್ಥರಾಗಿದ್ದಾರೆ. ಶಹಝಾದ್ ವಿರುದ್ಧ ನಿಷೇಧ ಅವಧಿಯು ಸ್ಯಾಂಪಲ್ ಪಡೆದ ದಿನವಾದ 2017ರ ಜುಲೈ 17 ರಿಂದ ಆರಂಭವಾಗಿದ್ದು, 2018ರ ಜನವರಿ 17ಕ್ಕೆ ಅವರು ಕ್ರಿಕೆಟ್‌ಗೆ ವಾಪಸಾಗಬಹುದು. ಶಹಝಾದ್ ಅಫ್ಘಾನಿಸ್ತಾನದ ಪರ 58 ಏಕದಿನ ಹಾಗೂ 58 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಎಲ್ಲ ಅಂತಾರಾಷ್ಟ್ರೀಯ ಕ್ರಿಕೆಟಿಗರು ಪೂರಕ ಆಹಾರ ಸೇವಿಸುವ ವೇಳೆ ಅದರಿಂದಾಗುವ ಹಾನಿ ಹಾಗೂ ಅಪಾಯದ ಬಗ್ಗೆ ಯೋಚಿಸಬೇಕು. ಆಹಾರವನ್ನು ಕೂಲಂಕಷವಾಗಿ ಪರೀಕ್ಷಿಸಿ ಸೇವಿಸಬೇಕು ಎಂದು ಐಸಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

      

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News