ಮೊದಲ ದಿನವೇ ಮುಂಬೈಗೆ ಮೂಗುದಾರ

Update: 2017-12-07 17:58 GMT

ನಾಗ್ಪುರ, ಡಿ.7: ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿನಯ್‌ಕುಮಾರ್ ಅಮೋಘ ಬೌಲಿಂಗ್(6-34)ದಾಳಿಗೆ ತತ್ತರಿಸಿದ 41 ಬಾರಿಯ ರಣಜಿ ಚಾಂಪಿಯನ್ ಮುಂಬೈ ತಂಡ ಮೊದಲ ಇನಿಂಗ್ಸ್ ನಲ್ಲಿ ಕೇವಲ 36 ಓವರ್‌ಗಳಲ್ಲಿ 173 ರನ್ ಗಳಿಸುವಷ್ಟರಲ್ಲಿ ಆಲೌಟಾಗಿದೆ.

 ಗುರುವಾರ ಮೊದಲ ದಿನದಾಟದ ಅಂತ್ಯದಲ್ಲಿ ಕರ್ನಾಟಕ ಪ್ರಥಮ ಇನಿಂಗ್ಸ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದೆ. ಮಾಯಾಂಕ್ ಅಗರವಾಲ್(ಅಜೇಯ 62) ಹಾಗೂ ಕೆ.ಅಬ್ಬಾಸ್(ಅಜೇಯ 12) ಕ್ರೀಸ್ ಕಾಯ್ದುಕೊಂಡಿದ್ದಾರೆ. 40 ರನ್ ಗಳಿಸಿ ಔಟಾಗಿರುವ ಆರ್.ಸಮರ್ಥ್ ಅವರು ಅಗರವಾಲ್‌ರೊಂದಿಗೆ ಮೊದಲ ವಿಕೆಟ್‌ಗೆ 83 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದ್ದಾರೆ.

ಮುಂಬೈ 173: ಇದಕ್ಕೆ ಮೊದಲು ವಿದರ್ಭ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಕರ್ನಾಟಕ ನಾಯಕ ವಿನಯ್‌ಕುಮಾರ್ ಮೊದಲು ಬೌಲಿಂಗ್ ಆಯ್ದುಕೊಂಡರು.

ವಿನಯ್ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಮುಂಬೈನ ಕಿರಿಯ ಆರಂಭಿಕ ಆಟಗಾರ ಪೃಥ್ವಿ ಶಾಗೆ(2)ಪೆವಿಲಿಯನ್ ಹಾದಿ ತೋರಿಸಿದರು. ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಜೈ ಬಿಶ್ತ್(1) ಹಾಗೂ ಅದೇ ಓವರ್‌ನ 2ನೇ ಎಸೆತದಲ್ಲಿ ಅಗ್ರ ಕ್ರಮಾಂಕದಲ್ಲಿ ಭಡ್ತಿ ಪಡೆದು ಆಡಿದ ಬೌಲರ್ ಆಕಾಶ್ ಪಾರ್ಕರ್ ವಿಕೆಟ್ ಉರುಳಿಸಿದ ವಿನಯ್ ವೃತ್ತಿಜೀವನದಲ್ಲಿ 2ನೇ ಬಾರಿ ಹ್ಯಾಟ್ರಿಕ್ ಪೂರೈಸಿದರು. ವಿನಯ್ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಮುಂಬೈನ ಕಿರಿಯ ಆರಂಭಿಕ ಆಟಗಾರ ಪೃಥ್ವಿ ಶಾಗೆ(2)ಪೆವಿಲಿಯನ್ ಹಾದಿ ತೋರಿಸಿದರು. ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಜೈ ಬಿಶ್ತ್(1) ಹಾಗೂ ಅದೇ ಓವರ್‌ನ 2ನೇ ಎಸೆತದಲ್ಲಿ ಅಗ್ರ ಕ್ರಮಾಂಕದಲ್ಲಿ ಭಡ್ತಿ ಪಡೆದು ಆಡಿದ ಬೌಲರ್ ಆಕಾಶ್ ಪಾರ್ಕರ್ ವಿಕೆಟ್ ಉರುಳಿಸಿದ ವಿನಯ್ ವೃತ್ತಿಜೀವನದಲ್ಲಿ 2ನೇ ಬಾರಿ ಹ್ಯಾಟ್ರಿಕ್ ಪೂರೈಸಿದರು.

 ವಿನಯ್ ರಣಜಿ ಟ್ರೋಫಿಯ ಕ್ವಾರ್ಟರ್‌ಫೈನಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆರನೇ ಬೌಲರ್ ಹಾಗೂ ಮೊದಲ ನಾಯಕನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. 1993-94ರ ಋತುವಿನಲ್ಲಿ ದಿಲ್ಲಿ ವಿರುದ್ಧ ಬಂಗಾಳದ ಎಸ್.ಸೇನ್ ಕೊನೆಯ ಬಾರಿ ಈ ಸಾಧನೆ ಮಾಡಿದ್ದರು.

ವಿನಯ್ ಮುಂಬೈ ವಿರುದ್ಧ ಹ್ಯಾಟ್ರಿಕ್ ಸಾಧಿಸಿರುವ ಮೂರನೇ ಬೌಲರ್ ಆಗಿದ್ದಾರೆ. 1972-73ರಲ್ಲಿ ರಣಜಿ ಫೈನಲ್‌ನಲ್ಲಿ ತಮಿಳುನಾಡಿನ ಕಲ್ಯಾಣಸುಂದರಮ್ ಹಾಗೂ 1981-82ರಲ್ಲಿ ಕರ್ನಾಟಕದ ರಘುರಾಮ್ ಭಟ್ ಈ ಸಾಧನೆ ಮಾಡಿದ್ದರು.

ಹ್ಯಾಟ್ರಿಕ್ ಪೂರೈಸಿದ ಬಳಿಕವೂ ತನ್ನ ಪ್ರಹಾರ ಮುಂದುವರಿಸಿದ ವಿನಯ್ ಅವರು ಸಿದ್ದೇಶ್ ಲಾಡ್(8), ಉಪ ನಾಯಕ ಸೂರ್ಯ ಕುಮಾರ್ ಯಾದವ್(14) ಹಾಗೂ ನಾಯಕ ಆದಿತ್ಯ ತಾರೆ(4) ಅವರನ್ನು ಅಲ್ಪ ಮೊತ್ತಕ್ಕೆ ಔಟ್ ಮಾಡಿ ಮುಂಬೈ ಸಂಕಷ್ಟ ಹೆಚ್ಚಿಸಿದರು.

49 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಮುಂಬೈ 103 ರನ್‌ಗೆ 9 ವಿಕೆಟ್ ಕಳೆದುಕೊಂಡಿತು. ಕೆಳ ಕ್ರಮಾಂಕದಲ್ಲಿ ತಂಡವನ್ನು ಆಧರಿಸಿದ ವೇಗದ ಬೌಲರ್ ಧವಳ್ ಕುಲಕರ್ಣಿ(75 ರನ್, 132 ಎಸೆತ,9 ಬೌಂಡರಿ, 2 ಸಿಕ್ಸರ್) ಶಿವಂ ಮಲ್ಹೋತ್ರಾ(7)ಅವರೊಂದಿಗೆ ಕೊನೆಯ ವಿಕೆಟ್‌ನಲ್ಲಿ 70 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 173 ರನ್‌ಗೆ ತಲುಪಿಸಿದರು. 41 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿದ ಮಲ್ಹೋತ್ರಾಗೆ ಅರವಿಂದ್ ಪೆವಿಲಿಯನ್ ಹಾದಿ ತೋರಿಸಿದರು. ಕುಲಕರ್ಣಿ ವಿಕೆಟ್ ಕಬಳಿಸಿದ ಅರವಿಂದ್ ಮುಂಬೈ ಮೊದಲ ಇನಿಂಗ್ಸ್ ಗೆ ತೆರೆ ಎಳೆದರು.

   ಮುಂಬೈ ಪರ ಅಖಿಲ್ ಹೆರ್ವಾಡ್ಕರ್(32) ಅಗ್ರ ಕ್ರಮಾಂಕದಲ್ಲಿ ಎರಡಂಕೆ ದಾಖಲಿಸಿದರು. ಕರ್ನಾಟಕ ಬೌಲರ್‌ಗಳು 22 ಎಕ್ಸ್‌ಟ್ರಾ ರನ್ ನೀಡಿ ಮುಂಬೈ ಸ್ಕೋರ್ ಹೆಚ್ಚಲು ಕಾರಣರಾದರು. ಶ್ರೀನಾಥ್ ಅರವಿಂದ್(2-45), ಅಭಿಮನ್ಯು ಮಿಥುನ್(1-31) ಹಾಗೂ ಕೆ.ಗೌತಮ್(1-31) ವಿನಯ್‌ಗೆ ಸಮರ್ಥ ಸಾಥ್ ನೀಡಿದರು.

ಸಂಕ್ಷಿಪ್ತ ಸ್ಕೋರ್

►ಮುಂಬೈ ಮೊದಲ ಇನಿಂಗ್ಸ್: 173/10

(ಧವಳ್ ಕುಲಕರ್ಣಿ 75, ಅಖಿಲ್ ಹೆರ್ವಾಡ್ಕರ್ 32, ಸೂರ್ಯಕುಮಾರ್ ಯಾದವ್ 14, ವಿನಯ್‌ಕುಮಾರ್ 6-34, ಎಸ್.ಅರವಿಂದ್ 2-45)

►ಕರ್ನಾಟಕ ಮೊದಲ ಇನಿಂಗ್ಸ್: 115/1

(ಮಾಯಾಂಕ್ ಅಗರವಾಲ್ ಅಜೇಯ 62, ಆರ್.ಸಮರ್ಥ್ 40, ಕೆ.ಅಬ್ಬಾಸ್ ಅಜೇಯ 12, ಶಿವಂ ದುಬೆ 1-11)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News