ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿ: ಸ್ಟೋಕ್ಸ್‌ಗೆ ಸ್ಥಾನ

Update: 2017-12-07 18:05 GMT

ಲಂಡನ್, ಡಿ.7: ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಗೆ ಗುರುವಾರ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು ಅಮಾನತಿನಲ್ಲಿರುವ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ಗೆ ಅವಕಾಶ ನೀಡಲಾಗಿದೆ. ಬ್ರಿಸ್ಟೊಲ್ ನೈಟ್ ಕ್ಲಬ್ ಹೊರಗೆ ತಡರಾತ್ರಿ ನಡೆದ ಹೊಡೆದಾಟ ಘಟನೆಯಲ್ಲಿ ಭಾಗಿಯಾದ ಆರೋಪದಲ್ಲಿ ಬ್ರಿಟನ್ ಪೊಲೀಸರಿಂದ ತನಿಖೆ ಎದುರಿಸುತ್ತಿರುವ ಸ್ಟೋಕ್ಸ್ ಪ್ರಸ್ತುತ ಅಮಾನತಿನಲ್ಲಿದ್ದಾರೆ.

ಹೊಡೆದಾಟದ ಘಟನೆ ವೇಳೆ ಸ್ಟೋಕ್ಸ್ ಅವರೊಂದಿಗಿದ್ದ ಇಂಗ್ಲೆಂಡ್‌ನ ಇನ್ನೋರ್ವ ಆಟಗಾರ ಅಲೆಕ್ಸ್ ಹೇಲ್ಸ್‌ರನ್ನು ಆಸೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಪ್ರಕಟಿಸಲಾಗಿರುವ ಇಂಗ್ಲೆಂಡ್‌ನ 16 ಸದಸ್ಯರ ತಂಡದಲ್ಲಿ ಸ್ಥಾನ ನೀಡಲಾಗಿದೆ. ಏಕದಿನ ಸರಣಿಯು ಜ.14 ರಿಂದ ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿದೆ.

ನ್ಯೂಝಿಲೆಂಡ್ ಮೂಲದ ಸ್ಟೋಕ್ಸ್ ಪ್ರಸ್ತುತ ಆಸ್ಟ್ರೇಲಿಯದಲ್ಲಿ ಆ್ಯಶಸ್ ಸರಣಿ ಆಡುತ್ತಿರುವ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದಿಂದ ದೂರ ಉಳಿದಿದ್ದಾರೆ. ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಈಗಾಗಲೇ ಎರಡು ಪಂದ್ಯಗಳನ್ನು ಆಡಿರುವ ಇಂಗ್ಲೆಂಡ್ ಎರಡರಲ್ಲೂ ಸೋತಿದೆ.

►ಇಂಗ್ಲೆಂಡ್ ಏಕದಿನ ತಂಡ:

ಇಯಾನ್ ಮೊರ್ಗನ್(ನಾಯಕ), ಮೊಯಿನ್ ಅಲಿ, ಜೋನಾಥನ್ ಬೈರ್‌ಸ್ಟೋವ್, ಜಾಕ್ ಬಾಲ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಟಾಮ್ ಕುರ್ರನ್, ಅಲೆಕ್ಸ್ ಹೇಲ್ಸ್, ಲಿಯಾಮ್ ಪ್ಲಂಕೆಟ್,ಆದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಮಾರ್ಕ್‌ವುಡ್.

ವೇಳಾಪಟ್ಟಿ

►ಮೊದಲ ಏಕದಿನ- ರವಿವಾರ ಜ.14, ಎಂಸಿಜಿ, ಮೆಲ್ಬೋರ್ನ್

►ಎರಡನೇ ಏಕದಿನ-ಶುಕ್ರವಾರ, ಜ.19, ಗಾಬಾ, ಬ್ರಿಸ್ಬೇನ್

►ಮೂರನೇ ಏಕದಿನ- ರವಿವಾರ, ಜ.21, ಎಸ್‌ಸಿಜಿ, ಸಿಡ್ನಿ

►ನಾಲ್ಕನೇ ಏಕದಿನ-ಶುಕ್ರವಾರ, ಜ.26, ಅಡಿಲೇಡ್ ಓವಲ್

►ಐದನೇ ಏಕದಿನ-ರವಿವಾರ, ಜ.28, ಪರ್ತ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News