ಪತ್ನಿಯ ಶವ ತಲೆ ಮೇಲೆ ಹೊತ್ತು ಸಾಗಿಸಿದವ ಈಗ ಸಿರಿವಂತ
ಕಟಕ್, ಡಿ.8: ಕಳೆದ ವರ್ಷ ಒಡಿಶಾದ ಬುಡಕಟ್ಟು ಸಮುದಾಯದ ನಿವಾಸಿ ದಾನಾ ಮಾಝಿ ಎಂಬಾತ ತನ್ನ ಪತ್ನಿಯ ಶವವನ್ನು 10 ಕಿ.ಮೀ. ದೂರ ತಲೆಯ ಮೇಲೆ ಹೊತ್ತುಕೊಂಡು ಸಾಗಿ ಅಂತ್ಯಸಂಸ್ಕಾರ ನಡೆಸಿದ ಘಟನೆಯ ವೀಡಿಯೊ ದೃಶ್ಯ ಪ್ರಸಾರವಾಗಿ ಇಡೀ ದೇಶದಲ್ಲಿ ತಲ್ಲಣ ಮೂಡಿಸಿತ್ತು. ವಾಹನದಲ್ಲಿ ಶವ ಕೊಂಡೊಯ್ಯಲು ಹಣ ಇಲ್ಲದ ಬಡಪಾಯಿ ದಾನಾ ಮಾಝಿಯ ನೆರವಿಗೆ ಆ್ಯಂಬುಲೆನ್ಸ್‌ನವರು ಕೂಡಾ ಬಂದಿರಲಿಲ್ಲ.
ಈ ಘಟನೆ ಕಳೆದು ಒಂದು ವರ್ಷವಾಗುತ್ತಾ ಬಂದಂತೆ ಇದೀಗ ಮಾಝಿಯ ಅದೃಷ್ಟ ಖುಲಾಯಿಸಿದೆ. ತನ್ನ ಪತ್ನಿಯ ಶವವನ್ನು ಹೊತ್ತುಕೊಂಡು ಸಾಗಿದ ಅದೇ ಬೀದಿಯಲ್ಲಿ ಕಳೆದ ಮಂಗಳವಾರ ಮಾಝಿ ಹೊಚ್ಚ ಹೊಸದಾದ, 65,000 ರೂ. ಕೊಟ್ಟು ಖರೀದಿಸಿದ ಹೋಂಡಾ ಬೈಕ್‌ನಲ್ಲಿ ಬಂದಿಳಿದು ತನ್ನ ಅದೃಷ್ಟ ಬದಲಾಗಿರುವುದನ್ನು ತೋರಿಸಿಕೊಟ್ಟಿದ್ದಾನೆ.
ಇದೆಲ್ಲಾ ಹೇಗಾಯಿತು ಎಂಬ ಪ್ರಶ್ನೆಗೆ ಮಾಝಿ ನೀಡುವ ಉತ್ತರ - ದಾನಿಗಳ, ಸಹೃದಯಿಗಳ ಮತ್ತು ಸರಕಾರದ ನೆರವು. ಪತ್ನಿಯ ಶವವನ್ನು ಹೊತ್ತುಕೊಂಡು ಸಾಗುವ ವೀಡಿಯೊ ದೃಶ್ಯಾವಳಿ ಪ್ರಸಾರವಾದ ಬಳಿಕ ಮಾಝಿಗೆ ಹಲವಾರು ದಾನಿಗಳು ನೆರವು ನೀಡಿದ್ದಾರೆ. ಬಹ್ರೈನ್‌ನ ಪ್ರಧಾನಿ ಖಲೀಫ ಬಿನ್ ಸಲ್ಮಾನ್ ಅಲ್ ಖಲೀಫ 9 ಲಕ್ಷ ರೂ. ಹಣ ನೀಡಿದ್ದಾರೆ. ಈ ಹಿಂದೆ ಬ್ಯಾಂಕ್‌ನಲ್ಲಿ ಖಾತೆ ಕೂಡಾ ಹೊಂದಿರದ ಮಾಝಿ ಈಗ ಸಾಕಷ್ಟು ಪ್ರಮಾಣದಲ್ಲಿ ಠೇವಣಿ ಹೊಂದಿದ್ದಾನೆ. ಭುವನೇಶ್ವರದ ವಸತಿ ಶಾಲೆಯಲ್ಲಿ ಮಾಝಿಯ ಮೂವರು ಪುತ್ರಿಯರಿಗೆ ಉಚಿತ ಶಿಕ್ಷಣದ ಅವಕಾಶ ದೊರೆತಿದೆ.
ಮತ್ತೆ ವಿವಾಹವಾಗಿರುವ ಮಾಝಿಗೆ ಪ್ರಧಾನಮಂತ್ರಿ ಗ್ರಾಮೀಣ ವಸತಿ ಯೋಜನೆಯಡಿ ವಸತಿಯೊಂದು ಮಂಜೂರಾಗಿದ್ದು ಅದು ನಿರ್ಮಾಣ ಹಂತದಲ್ಲಿದೆ.ಹೀಗೆ ಬರಿಗೈ ದಾಸಯ್ಯನಾಗಿದ್ದ ಮಾಝಿಯ ಅದೃಷ್ಟ ವರ್ಷ ಕಳೆಯುವಷ್ಟರಲ್ಲಿ ಖುಲಾಯಿಸಿದೆ.