ಕ್ಯಾಲಿಫೋರ್ನಿಯ ಕಾಡ್ಗಿಚ್ಚು: ಕನಿಷ್ಠ 439 ಮನೆಗಳು ಬೆಂಕಿಗಾಹುತಿ

Update: 2017-12-08 15:20 GMT

ವೆಂಚುರ (ಕ್ಯಾಲಿಫೋರ್ನಿಯ), ಡಿ. 8: ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಲಾಸ್ ಏಂಜಲಿಸ್‌ನಲ್ಲಿ ಹಬ್ಬಿರುವ ಕಾಡ್ಗಿಚ್ಚಿನಲ್ಲಿ ಕನಿಷ್ಠ 439 ಮನೆಗಳು ಸುಟ್ಟು ಹೋಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ಹೇಳಿದ್ದಾರೆ.

ವೆಂಚುರ ಕೌಂಟಿಯ ಗುಡ್ಡಗಾಡು ಅರಣ್ಯಪ್ರದೇಶದಿಂದ ಹಿಡಿದು ಪೆಸಿಫಿಕ್ ಸಾಗರದವರೆಗಿನ 466 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೆಂಕಿ ದಾಂಧಲೆ ನಡೆಸುತ್ತಿದೆ. ಬಲವಾಗಿ ಬೀಸುತ್ತಿರುವ ಗಾಳಿಯಿಂದ ಹಿಗ್ಗುತ್ತಿರುವ ಬೆಂಕಿ ಹೊಸ ಪ್ರದೇಶಗಳಿಗೆ ವ್ಯಾಪಿಸುತ್ತಿದೆ.

ಈವರೆಗೆ ಸುಮಾರು 5 ಶೇಕಡದಷ್ಟು ಬೆಂಕಿಯನ್ನು ಮಾತ್ರ ನಿಯಂತ್ರಿಸಲಾಗಿದೆ. ಬೆಂಕಿಯನ್ನು ಹಬ್ಬಿಸುತ್ತಿರುವ ‘ಸಾಂತಾ ಆನಾ’ ಗಾಳಿ ಮುಂದುವರಿಯುತ್ತದೆ ಎಂದು ನಿರೀಕ್ಷಿಸಲಾಗಿದೆ.

ಬೆಂಕಿಯನ್ನು ನಂದಿಸುವಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ರಾತ್ರಿ ತಿಳಿಸಿದರು. ಆದಾಗ್ಯೂ, ಸಾವಿರಾರು ಮನೆಗಳು ಅಪಾಯಕ್ಕೆ ಸಿಲುಕಿವೆ.

ಇದು ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ ಕಾಣಿಸಿಕೊಂಡಿರುವ ಅತ್ಯಂತ ದೊಡ್ಡ ಹಾಗೂ ವಿನಾಶಕಾರಿ ಕಾಡ್ಗಿಚ್ಚಾಗಿದೆ.

ತುರ್ತು ತೆರವಿಗೆ ಸಿದ್ಧರಾಗಿ: ಜನರಿಗೆ ಅಧಿಕಾರಿಗಳ ಎಚ್ಚರಿಕೆ

ಕಾಡ್ಗಿಚ್ಚಿನಿಂದಾಗಿ ಮನೆಯಿಂದ ತೆರವುಗೊಳ್ಳಬೇಕಾದ ಸಂದರ್ಭ ಬಂದರೆ, ಕುಟುಂಬ ಸಮೇತ ತೆರಳಲು ಸಿದ್ಧರಾಗಿ ಎಂಬುದಾಗಿ ಕ್ಯಾಲಿಫೋರ್ನಿಯ ರಾಜ್ಯದ ‘ಸಿಎಎಲ್ ಫಯರ್’ ಸಂಸ್ಥೆ ಜನರನ್ನು ಎಚ್ಚರಿಸಿದೆ.

ಪೋರ್ಟ್‌ಲ್ಯಾಂಡ್, ಒರೆಗಾನ್ ಮತ್ತು ನೆವಾಡ ಮುಂತಾದ ದೂರದ ರಾಜ್ಯಗಳ 2,600ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದಾರೆ.

ಈಗಾಗಲೇ 2 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಹಾಗೂ ಅವರ ಪೈಕಿ ಕೆಲವರು ವಾಪಸಾಗಲು ಸಿದ್ಧತೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News