ಟ್ರಂಪ್ ಘೋಷಣೆ ಬೆನ್ನಲ್ಲೇ ಫೆಲೆಸ್ತೀನ್‌ನಲ್ಲಿ ಪ್ರತಿಭಟನೆ ಸ್ಫೋಟ

Update: 2017-12-08 16:13 GMT

ರಮಲ್ಲಾ (ಫೆಲೆಸ್ತೀನ್), ಡಿ. 8: ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿಯಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಫೆಲೆಸ್ತೀನ್‌ನಲ್ಲಿ ಹಿಂಸಾಚಾರ ಆರಂಭವಾಗಿದೆ.

ಅಲ್ಲಲ್ಲಿ ಹಿಂಸಾಚಾರ ಸ್ಫೋಟಿಸಿದ್ದು, ವಲಯದಲ್ಲಿ ಹೊಸದಾಗಿ ಸಂಘರ್ಷ ನಡೆಯುವ ಭೀತಿಯನ್ನು ಹುಟ್ಟುಹಾಕಿದೆ.

  ಪಶ್ಚಿಮ ದಂಡೆಯಲ್ಲಿ ನೂರಾರು ಸೈನಿಕರನ್ನು ಇಸ್ರೇಲ್ ಸೇನೆ ನಿಯೋಜಿಸಿರುವಂತೆಯೇ, ವಿವಿಧ ಸ್ಥಳಗಳಲ್ಲಿ ಫೆಲೆಸ್ತೀನ್ ಪ್ರತಿಭಟನಕಾರರು ಮತ್ತು ಇಸ್ರೇಲ್ ಸೈನಿಕರ ನಡುವೆ ಘರ್ಷಣೆಗಳು ಸಂಭವಿಸಿವೆ.

ಗಾಝಾ ಪಟ್ಟಿಯಿಂದ ಹಲವಾರು ಕ್ಷಿಪಣಿಗಳು ಹಾರಿದವು ಎಂದು ಇಸ್ರೇಲ್ ಸೇನೆ ಹೇಳಿದೆ. ಆ ಪೈಕಿ ಒಂದು ಇಸ್ರೇಲ್ ನೆಲಕ್ಕೆ ಬಡಿಯಿತು. ಆಗ ಇಸ್ರೇಲ್ ವಾಯುಪಡೆ ಮತ್ತು ಭೂಸೇನಾ ಪಡೆದ ಪ್ರತಿ ದಾಳಿ ನಡೆಸಿತು ಎನ್ನಲಾಗಿದೆ.

ರಮಲ್ಲಾ, ಹೆಬ್ರಾನ್, ಬೆತ್ಲೆಹೆಮ್ ಮತ್ತು ನಬ್ಲಸ್ ಮುಂತಾದ ಪಶ್ಚಿಮ ದಂಡೆ ನಗರಗಳು ಮತ್ತು ಗಾಝಾದಲ್ಲಿ ಗುರುವಾರ ಪ್ರತಿಭಟನೆಗಳು ನಡೆದವು.

 ರಮಲ್ಲಾ ಸಮೀಪದ ತಪಾಸಣಾ ಠಾಣೆಯ ಸಮೀಪ ಪ್ರತಿಭಟನೆ ನಡೆಸಿದ ನೂರಾರು ಮಂದಿಯನ್ನು ಇಸ್ರೇಲ್ ಪೊಲೀಸರು ಅಶ್ರುವಾಯು ಸಿಡಿಸಿ ಚದುರಿಸಿದರು.

ಅದೇ ವೇಳೆ, ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೈನಿಕರು ಹಾರಿಸಿದ ರಬ್ಬರ್ ಗುಂಡುಗಳಿಂದಾಗಿ 22 ಮಂದಿ ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್‌ನ ರೆಡ್ ಕ್ರೆಸೆಂಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News