ಅಂದು ಬಾಬರಿ ಮಸೀದಿ ಕೆಡವಿದ್ದವರಿಗೆ ಇಂದು ಮಸೀದಿ ಕಟ್ಟುವ ಗುರಿ

Update: 2017-12-08 16:40 GMT

ಅಯೋಧ್ಯೆ, ಡಿ.8: 1992ರ ಡಿಸೆಂಬರ್ 6ರಂದು ಪಾನಿಪತ್‍ನ ಶಿವಸೇನೆ ನಾಯಕರಾಗಿದ್ದ ಬಲ್‍ಬೀರ್ ಸಿಂಗ್ ಅತ್ಯುತ್ಸಾಹದಲ್ಲಿದ್ದರು. ಬಾಬರಿ ಮಸೀದಿಯ ಮೇಲೆ ಹತ್ತಿ ಕೇಕೆ ಹಾಕಿದ್ದರು. ಆದರೆ 25 ವರ್ಷಗಳ ನಂತರ ಅವರು ಸಂಪೂರ್ಣ ಬದಲಾಗಿದ್ದಾರೆ. ಈ ಕೃತ್ಯ ಎಸಗಿದ ನಂತರ ಪಾಪಪ್ರಜ್ಞೆ ಅವರನ್ನು ಬೆಂಬಿಡದೆ ಕಾಡುತ್ತಿತ್ತು. ತಾನು ಮಾಡಿದ ಪಾಪದ ಪ್ರಾಯಶ್ಚಿತ ಮಾಡುವ ಸಲುವಾಗಿ 100 ಮಸೀದಿಗಳನ್ನು ನಿರ್ಮಿಸುವ ನಿರ್ಧಾರ ಮಾಡಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ.

ಬಲ್‍ಬೀರ್ ಸಿಂಗ್ ಇದೀಗ ಮುಹಮ್ಮದ್ ಮೀರ್ ಆಗಿದ್ದು, ಅವರ ಸಂಗಡಿಗ ಕರಸೇವಕನಾಗಿದ್ದ ಯೋಗೇಂದ್ರಪಾಲ್ ಕೂಡ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದು, ಈಗ ಮುಹಮ್ಮದ್ ಉಮರ್ ಆಗಿದ್ದಾರೆ.

ಬಲ್‍ಬೀರ್ ಸಿಂಗ್ ಈವರೆಗೆ 40 ಮಸೀದಿಗಳನ್ನು  ಕಟ್ಟುವುದರಲ್ಲಿ ಸಹಕರಿಸಿದ್ದಾರೆ. 1992 ಡಿಸೆಂಬರ್ 6ರಂದು ಬಾಬರಿ ಮಸೀದಿಯ ಗೊಮ್ಮಟವನ್ನು ಕೆಡವಲು ಓಡಿ ಹತ್ತಿದವರಲ್ಲಿ ಬಲ್‍ಬೀರ್ ಸಿಂಗ್ ಕೂಡಾ ಇದ್ದರು. ಮಸೀದಿ ಕೆಡವಿದ ಬಳಿಕ ಪಾನಿಪತ್‍ಗೆ ಮರಳಿದಾಗ ಬಲಬೀರ್ ಸಿಂಗ್‍ರಿಗೆ ವೀರೋಚಿತ  ಸ್ವಾಗತ ಸಿಕ್ಕಿತ್ತು. ಅಂದು ತಂದಿದ್ದ ಮಸೀದಿಯ ಎರಡು ಇಟ್ಟಿಗೆಗಳು ಶಿವಸೇನೆಯ ಕಚೇರಿಯಲ್ಲಿ ಈಗಲೂ ಇವೆ.

ನಂತರ ಬಲಬೀರ್ ಸಿಂಗ್‍ರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳಾಯಿತು. ದೇವ್‍ಬಂದ್‍ನ ವಿದ್ವಾಂಸ ಮೌಲಾನ ಕಲೀಂ ಸಿದ್ದೀಕ್‍ರನ್ನು ಕೊಲ್ಲುವ ಹೊಣೆ ಬಲಬೀರ್‍ ಸಿಂಗ್‍ರಿಗೆ ಸಿಕ್ಕಿತ್ತು. ಇದು ಅವರ ಜೀವನವನ್ನೇ ಬದಲಾಯಿಸಿತ್ತು. ಕಲೀಂ ಸಿದ್ದೀಕ್‍ರನ್ನು ಕೊಲ್ಲಲು ಬಂದ ಬಲ್ ಬೀರ್ ಮೌಲಾನರ ಭಾಷಣ ಆಲಿಸಿದ್ದರು. ಅದರೊಂದಿಗೆ ಅವರ ಜೀವನದಲ್ಲಿ ಭಾರೀ ಬದಲಾವಣೆಯಾಯಿತು. ನಂತರ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಆದರೆ ಊರಿಗೆ ಮರಳಲು ಸಾಧ್ಯವಾಗದೆ ಹೈದರಾಬಾದ್‍ಗೆ ತಮ್ಮ ವಾಸ್ತವ್ಯ ಬದಲಾಯಿಸಿದ್ದಾರೆ.

ಯೋಗೇಂದ್ರಪಾಲ್ ಈಗ ಮುಹಮ್ಮದ್ ಉಮರ್ ಎಂದು ಹೆಸರು ಬದಲಾಯಿಸಿದ್ದಾರೆ. ಇಷ್ಟೇ ಅಲ್ಲದೆ ಸಿಬಿಐ ಆರೋಪಪಟ್ಟಿಯಲ್ಲಿರುವ ಆರೋಪಿಗಳಾದ ಪ್ರವೀಣ್ ಶರ್ಮ, ಸಂತೋಷ್ ದುಬೆ, ರಾಮ್‍ಜಿ ಗುಪ್ತ, ವಿಜಯ್ ತಿವಾರಿ ಮುಂತಾದವರನ್ನು ಪಾಪಪ್ರಜ್ಞೆ ಕಾಡುತ್ತಿದೆ. ಒಂದು ಸಂದರ್ಶನದಲ್ಲಿ ಅವರು ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. 4,000 ಮಂದಿ ಕರಸೇವಕರಿಗೆ ತರಬೇತಿ ನೀಡಿದ ಅಯೋಧ್ಯೆಯ ಬಜರಂಗದಳ ಯುವ ನಾಯಕ ಶಿವ ಪ್ರಸಾದ್‍ಗೆ ಒಂದು ವರ್ಷದ ನಂತರ ಖಿನ್ನತೆಗೆ ಒಳಗಾಗಿದ್ದರು. ಹಲವು ವೈದ್ಯರು, ಪಂಡಿತರನ್ನು ಭೇಟಿಯಾಗಿದ್ದರೂ ಯಾವುದೇ ಪರಿಹಾರ ಲಭಿಸಿರಲಿಲ್ಲ. ಕೊನೆಗೆ ಕೆಲಸ ಹುಡುಕಿ ಶಾರ್ಜಾಕ್ಕೆ ತೆರಳಿದ ಅವರು 1999ರಲ್ಲಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿ ಮುಹಮ್ಮದ್ ಮುಸ್ತಫಾ ಆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News