ಬೃಹತ್ ಮೊತ್ತದತ್ತ ಕರ್ನಾಟಕ ತಂಡ

Update: 2017-12-08 18:20 GMT

ನಾಗ್ಪುರ, ಡಿ.8: ನಾಲ್ವರು ಬ್ಯಾಟ್ಸ್‌ಮನ್‌ಗಳು ನೀಡಿದ ಅರ್ಧಶತಕದ ಕೊಡುಗೆಯ ನೆರವಿನಿಂದ ಕರ್ನಾಟಕ ತಂಡ ಮುಂಬೈ ವಿರುದ್ಧದ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 222 ರನ್ ಮುನ್ನಡೆ ಸಾಧಿಸಿದೆ. ಎರಡನೇ ದಿನವಾದ ಶುಕ್ರವಾರ 1 ವಿಕೆಟ್ ನಷ್ಟಕ್ಕೆ 115 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿರುವ ಕರ್ನಾಟಕ ದಿನದಾಟದಂತ್ಯಕ್ಕೆ 6 ವಿಕೆಟ್‌ಗಳ ನಷ್ಟಕ್ಕೆ 395 ರನ್ ಗಳಿಸಿದೆ. ಪ್ರಸ್ತುತ ರಣಜಿ ಋತುವಿನಲ್ಲಿ ಮತ್ತೊಮ್ಮೆ 500ಕ್ಕೂ ಅಧಿಕ ಸ್ಕೋರ್ ಗಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ಅಗ್ರ ಕ್ರಮಾಂಕದ ಆಟಗಾರರಾದ ಮಾಯಾಂಕ್ ಅಗರವಾಲ್(78), ಕೆ.ಅಬ್ಬಾಸ್(50), ಸಿಎಂ ಗೌತಮ್(79) ಹಾಗೂ ಶ್ರೇಯಸ್ ಗೋಪಾಲ್(ಔಟಾಗದೆ 80) ಕರ್ನಾಟಕದ ಇನಿಂಗ್ಸ್ ಗೆ ಪ್ರಮುಖ ಕಾಣಿಕೆ ನೀಡಿದರು.

 ದಿನದ 9ನೇ ಓವರ್‌ನಲ್ಲಿ ವೇಗದ ಬೌಲರ್ ಶಿವಂ ಮಲ್ಹೋತ್ರಾ ಕರ್ನಾಟಕದ ಆರಂಭಿಕ ಆಟಗಾರ ಮಾಯಾಂಕ್ ವಿಕೆಟ್ ಕಬಳಿಸುವ ಮೂಲಕ ಮುಂಬೈಗೆ ಮೇಲುಗೈ ಒದಗಿಸಿಕೊಟ್ಟಿದ್ದರು. ಅಗರವಾಲ್(78,104 ಎಸೆತ,11 ಬೌಂಡರಿ,1ಸಿಕ್ಸರ್)ನಿನ್ನೆಯ ಮೊತ್ತಕ್ಕೆ 16 ರನ್ ಗಳಿಸುವಷ್ಟರಲ್ಲಿ ಔಟಾದರು. ಈ ಋತುವಿನಲ್ಲಿ ಆರನೇ ಶತಕ ಬಾರಿಸುವುದರಿಂದ ವಂಚಿತರಾದರು. ಚೊಚ್ಚಲ ಪಂದ್ಯ ಆಡುತ್ತಿರುವ ಶಿವಂ ದುಬೆ, ಕರುಣ್ ನಾಯರ್‌ಗೆ(16)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ನೋಡಿಕೊಂಡರು. ಪವನ್ ದೇಶಪಾಂಡೆ(8) ಹಾಗೂ ಅಬ್ಬಾಸ್(50ರನ್, 137 ಎಸೆತ, 5 ಬೌಂಡರಿ) ವಿಕೆಟ್ ಪತನಗೊಂಡಾಗ ಕರ್ನಾಟಕ 218 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

 6ನೇ ವಿಕೆಟ್‌ಗೆ 103 ರನ್ ಜೊತೆಯಾಟ ನಡೆಸಿದ ಗೌತಮ್ ಹಾಗೂ ಗೋಪಾಲ್ ಮುಂಬೈ ಮೇಲೆ ಸವಾರಿ ಮಾಡಿದರು. ಟೂರ್ನಿಯಲ್ಲಿ ಆಡಿರುವ 7 ಇನಿಂಗ್ಸ್‌ಗಳಲ್ಲಿ ಕೇವಲ 18 ರನ್ ಗಳಿಸಿ ಕಳಪೆ ಫಾರ್ಮ್‌ನಲ್ಲಿದ್ದ ಗೌತಮ್ ತಂಡಕ್ಕೆ ಅಗತ್ಯವಿದ್ದಾಗಲೇ ಮೊದಲಿನ ಲಯಕ್ಕೆ ಮರಳಿದರು.

ಯುವ ಬೌಲರ್ ದುಬೆಗೆ ವಿಕೆಟ್ ಒಪ್ಪಿಸುವ ಮೊದಲು ಗೌತಮ್ 111 ಎಸೆತಗಳನ್ನು ಎದುರಿಸಿ 12 ಬೌಂಡರಿ, 1 ಸಿಕ್ಸರ್ ಬಾರಿಸಿದ್ದರು. ಗೌತಮ್ ವಿಕೆಟ್ ಪಡೆಯುವುದರೊಂದಿಗೆ ದುಬೆ ಐದು ವಿಕೆಟ್ ಗೊಂಚಲು ಪೂರೈಸಿದರು.

ನಾಯಕ ವಿನಯ್‌ಕುಮಾರ್(ಅಜೇಯ 31) ಹಾಗೂ ಗೋಪಾಲ್ ಏಳನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 74 ರನ್ ಗಳಿಸುವ ಮೂಲಕ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ಯುತ್ತಿದ್ದಾರೆ.

ಔಟಾಗದೆ 80 ರನ್(151 ಎಸೆತ,7 ಬೌಂಡರಿ)ಗಳಿಸಿರುವ ಗೋಪಾಲ್ ನಾಲ್ಕನೆ ಪ್ರಥಮ ದರ್ಜೆ ಶತಕದತ್ತ ಮುನ್ನುಗ್ಗುತ್ತಿದ್ದಾರೆ.

ಮುಂಬೈಗೆ ಪಂದ್ಯದಲ್ಲಿ ಮರುಹೋರಾಟ ನೀಡಲು ಭಾರೀ ಪ್ರಯತ್ನದ ಅಗತ್ಯವಿದೆ. ಪಿಚ್‌ನಲ್ಲಿ ಬೌನ್ಸ್ ಆಗುತ್ತಿದ್ದರೂ ಮೂರನೇ ದಿನವೂ ಬ್ಯಾಟಿಂಗ್ ಸ್ನೇಹಿಯಾಗಿ ವರ್ತಿಸುವ ಸಾಧ್ಯತೆಯಿದೆ. 40 ಬಾರಿಯ ರಣಜಿ ಚಾಂಪಿಯನ್ ಮುಂಬೈ ಮೊದಲ ಇನಿಂಗ್ಸ್ ನಲ್ಲಿ ವಿನಯ್‌ಕುಮಾರ್ ದಾಳಿಗೆ ತತ್ತರಿಸಿ ಕೇವಲ 173 ರನ್‌ಗೆ ಆಲೌಟಾಗಿತ್ತು.

ಸಂಕ್ಷಿಪ್ತ ಸ್ಕೋರ್

ಮುಂಬೈ ಮೊದಲ ಇನಿಂಗ್ಸ್: 173/10

ಕರ್ನಾಟಕ ಮೊದಲ ಇನಿಂಗ್ಸ್: 395/6

(ಎಸ್.ಗೋಪಾಲ್ ಅಜೇಯ 80,ಗೌತಮ್ 79,ಮಾಯಾಂಕ್ ಅಗರವಾಲ್ 78, ಕೆ.ಅಬ್ಬಾಸ್ 50, ಆರ್.ಸಮರ್ಥ್ 40, ವಿನಯ್ ಕುಮಾರ್ ಅಜೇಯ 31 ಶಿವಂ ದುಬೆ 5-79)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News