ಒಂದೇ ದಿನ 5 ಪದಕ ಗೆದ್ದ ಭಾರತ

Update: 2017-12-08 18:28 GMT

ಟೋಕಿಯೋ, ಡಿ.8: ಹತ್ತನೇ ಆವೃತ್ತಿಯ ಏಷ್ಯನ್ ಏರ್‌ಗನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಮೊದಲ ದಿನವೇ ಐದು ಪದಕಗಳನ್ನು ಬಾಚಿಕೊಂಡಿರುವ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

 ಜಪಾನ್‌ನ ವಾಕೊ ಸಿಟಿಯಲ್ಲಿ ನಡೆದ ಪುರುಷರ 10 ಮೀ. ಏರ್ ರೈಫಲ್‌ನ ವೈಯಕ್ತಿಕ ವಿಭಾಗದಲ್ಲಿ ರವಿ ಕುಮಾರ್ ಕಂಚು ಜಯಿಸಿದರು. ಜೂನಿಯರ್ ಪುರುಷರ ಸ್ಪರ್ಧೆಯಲ್ಲಿ ಅರ್ಜುನ್ ಬಾಬುಟಾ ಬೆಳ್ಳಿ ಗೆದ್ದುಕೊಂಡರು. ಮೂರು ಏರ್ ರೈಫಲ್ ಸ್ಪರ್ಧೆಗಳಲ್ಲಿ ಭಾರತ ಮೂರು ಬೆಳ್ಳಿ ಪದಕಗಳನ್ನು ಬಾಚಿಕೊಂಡಿತು.

ವಾಕೊ ಸಿಟಿಯಲ್ಲಿ ಟೋಕಿಯೊ 2020ರ ಒಲಿಂಪಿಕ್ಸ್ ನ ಸ್ಪರ್ಧೆ ನಡೆಯಲಿದೆ.

ಪುರುಷರ 10 ಮೀ. ಏರ್ ರೈಫಲ್‌ನ ಅರ್ಹತಾ ಸುತ್ತಿನಲ್ಲಿ 627.5 ಅಂಕ ಗಳಿಸಿದ ದೀಪಕ್ ಕುಮಾರ್ ಫೈನಲ್‌ಗೆ ತಲುಪಿದ್ದಾರೆ. ರವಿ ಕುಮಾರ್(624.6)ಆರನೇ ಸ್ಥಾನಿಯಾಗಿ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಗಗನ್ ನಾರಂಗ್(624.5)7ನೇ ಸ್ಥಾನ ಪಡೆದರು.

ಫೈನಲ್ ರೌಂಡ್‌ನಲ್ಲಿ ಚೀನಾದ ಸಾಂಗ್ ಬುಹಾನ್(250.2) ಚಿನ್ನ ಜಯಿಸಿದರೆ, ಜಪಾನ್‌ನ ಕಾವೊ ಯಿಫೆ(248.6) ಬೆಳ್ಳಿ ಹಾಗೂ ರವಿ(225.7) ಕಂಚಿನ ಪದಕ ಜಯಿಸಿದ್ದಾರೆ. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ ಹಿರಿಯ ಶೂಟರ್ ಗಗನ್(205.6)ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಜೂನಿಯರ್ ಪುರುಷರ 10 ಮೀ. ರೈಫಲ್ ಸ್ಪರ್ಧೆಯಲ್ಲಿ ಅರ್ಜುನ್ ಬಾಬುಟಾ ಎರಡನೇ ಸ್ಥಾನ ಪಡೆದರು. ಚೀನಾದ ಯುಕುನ್ ಲೀ ಚಿನ್ನ ಜಯಿಸಿದ್ದಾರೆ. ಅರ್ಜುನ್ 0.1 ಅಂಕದಿಂದ ಚಿನ್ನ ವಂಚಿತರಾದರು.

ಅರ್ಜುನ್, ತೇಜಸ್ ಕೃಷ್ಣ ಹಾಗೂ ಸನ್ಮೂನ್ ಸಿಂಗ್ ಏರ್‌ರೈಫಲ್ ಟೀಮ್ ಇವೆಂಟ್‌ನಲ್ಲಿ ಒಟ್ಟು 1867.5 ಅಂಕ ಗಳಿಸಿ ಬೆಳ್ಳಿ ಜಯಿಸಿದರು.

ರವಿ, ಗಗನ್ ಹಾಗೂ ದೀಪಕ್ ಸೀನಿಯರ್ ಪುರುಷರ ಏರ್‌ರೈಫಲ್ ಸ್ಪರ್ಧೆಯಲ್ಲಿ ಒಟ್ಟು 1876.6 ಅಂಕ ಗಳಿಸಿ ಬೆಳ್ಳಿ ಜಯಿಸಿದರು. ಜಪಾನ್(1866.7) ಹಾಗೂ ಚೀನಾ(1885.9)ಕ್ರಮವಾಗಿ ಮೊದಲ ಹಾಗೂ ಮೂರನೆ ಸ್ಥಾನ ಪಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News