ಯುನಿವೆಫ್ ವತಿಯಿಂದ 'ಪ್ರವಾದಿ ಸಂದೇಶ ಪ್ರಚಾರ ಅಭಿಯಾನ' ಉದ್ಘಾಟನೆ

Update: 2017-12-09 09:15 GMT

ಮಂಗಳೂರು, ಡಿ. 9:  2018ರ ಫೆ. 2ರ ತನಕ ರಾಷ್ಟ್ರೀಯತೆ, ಜಾತ್ಯಾತೀತತೆ ಹಾಗೂ ಸ್ವಚ್ಛತೆ ಮತ್ತು ಪ್ರವಾದಿ ಮುಹಮ್ಮದ್(ಸ) ಎಂಬ   ವಿಷಯದಲ್ಲಿ ಯುನಿವೆಫ್ ಕರ್ನಾಟಕ ಆಯೋಜಿಸಿರುವ 'ಅರಿಯಿರಿ ಮನುಕುಲದ ಪ್ರವಾದಿ' ಎಂಬ ಅಭಿಯಾನದ ಉದ್ಘಾಟನಾ ಸಮಾರಂಭವು ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್‌ನಲ್ಲಿ ನಡೆಯಿತು.

ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಜಗತ್ತಿನ ಹೃದಯ ಗೆದ್ದ ಮಮತೆಯ ಪ್ರವಾದಿ ಎಂಬ ವಿಷಯದಲ್ಲಿ ಪ್ರಮುಖ ಭಾಷಣ ಮಾಡಿ, ಪ್ರವಾದಿ ಮುಹಮ್ಮದ್ (ಸ) ಕರುಣಾಮಯಿಯಾಗಿದ್ದರು. ತನ್ನ ಬದುಕಿನಲ್ಲಿ ವಿರೋಧಿಗಳು ನಡೆಸಿದ್ದ ಎಲ್ಲ ರೀತಿಯ ಮರ್ದನಗಳನ್ನು ಸಹಿಸಿ, ಯಾವುದೇ ಪ್ರತೀಕಾರ ಮಾಡದೆ, ಮಮತೆಯಲ್ಲಿ ಅವರೊಂದಿಗೆ ವ್ಯವಹರಿಸಿ, ಅವರು ಮಾಡಿರುವ ಎಲ್ಲ ಕೃತ್ಯಗಳಿಗೆ ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಕ್ಷಮಾದಾನ ಮಾಡಿ, ಅವರ ಹೃದಯಗಳನ್ನು ಗೆದ್ದ ಮಹಾನರಾಗಿದ್ದರು ಪ್ರವಾದಿ (ಸ). ಬಲಪ್ರಯೋಗದ ಬದಲು ಹೃದಯ ಪರಿವರ್ತನೆಯನ್ನು ತನ್ನ ಮೂಲವನ್ನಾಗಿಸಿದರು. ಅವರ ಪ್ರವಾದಿತ್ವದ 23 ವರ್ಷಗಳ ಜೀವನ ಅಂತ್ಯ ದಿನದವರೆಗೂ ಮಾನವ ಕೋಟಿಗೆ ಅನುಕರಣೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಫೀಉದ್ದೀನ್ ಕುದ್ರೋಳಿ ಅವರು ಉಳ್ಳಾಲದ ನಿಮ್ರಾ ಮಸೀದಿಯಲ್ಲಿ ನಿರ್ವಹಿಸಿದ ಖುತ್ಬಾಗಳ ಸಿ.ಡಿ. ಬಿಡುಗಡೆ ಕಾರ್ಯಕ್ರಮವೂ ನಡೆಯಿತು.

ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾರುಲ್ ಇಲ್ಮ್ ವಿದ್ಯಾರ್ಥಿ ಝುಲ್ಫಿಕರ್ ಖಾಸಿಮ್ ಕಿರ್‌ಅತ್ ಪಠಿಸಿದರು. ಮಂಗಳೂರು ಶಾಖೆಯ ಕಾರ್ಯದರ್ಶಿ ಅಡ್ವೊಕೇಟ್ ಸಿರಾಜುದ್ದೀನ್ ಸ್ವಾಗತಿಸಿದರು. ರಾಜ್ಯ ಸಲಹಾ ಸಮಿತಿ ಸದಸ್ಯ ಅಬ್ದುಲ್ಲಾ ಪಾರೆ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಶಾಖಾಧ್ಯಕ್ಷ ನೌಫಲ್ ಹಸನ್ ವಂದಿಸಿದರು. ಜಿಲ್ಲಾಧ್ಯಕ್ಷ ಸೈಫುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News