ಕಾಪು: ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಗೆ ಚಾಲನೆ

Update: 2017-12-09 09:58 GMT

ಕಾಪು, ಡಿ. 9: ಮಾನಸಿಕ ಸ್ಥಿಮಿತಕ್ಕೆ ಚೆಸ್ ಆಟ ಪೂರಕವಾಗಿದೆ. ವಿಶ್ವದಲ್ಲಿ 30 ಗ್ರಾಂಡ್ ಮಾಸ್ಟರ್‌ಗಳನ್ನು ಹೊಂದಿರುವ ಚೆಸ್ ಕ್ರೀಡೆಯಲ್ಲಿ ಮಕ್ಕಳು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಅದಾನಿ -ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ತಿಳಿಸಿದರು.

ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆ ಹಾಗೂ ಕಲಾಭಿಮಾನಿ ಸಂಘದ ಸಂಯುಕ್ತ ಆಶ್ರಯದಲ್ಲಿ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆರಂಭವಾದ ಶ್ರೀ ನಾರಾಯಣ ಗುರು ಟ್ರೋಫಿ ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಚೆಸ್‌ನಲ್ಲಿ ಭಾರತ ದೇಶವು ವಿಶ್ವದಲ್ಲಿ 10ನೇ ಸ್ಥಾನ ಪಡೆದಿದೆ. ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ಇಲ್ಲಿ ಆಯೋಜಿಸುವ ಮೂಲಕ ಚೆಸ್ ಸ್ಪರ್ಧಾಳುಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ ಎಂದರು.

ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಚಿಂತನೆ ನೀಡುವ ಕ್ರೀಡೆ ಚದುರಂಗ. ಬದುಕು ಕೂಡ ಚದುರಂಗವಿದ್ದಂತೆ. ಸ್ಥಿತ ಪ್ರಜ್ಞೆ ಮೂಡಲು ಕ್ರೀಡೆ ಪ್ರೇರಪಣೆ ನೀಡುತ್ತದೆ. ಜಾತಿ, ಮತ, ಪಂಥ ಮೀರಿ ನಿಲ್ಲುವ ಶಕ್ತಿ ಕ್ರೀಡೆಗಿದೆ ಎಂದು ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ತೀರ್ಪುಗಾರ ವಸಂತ ಬಿ.ಎಚ್. ಅವರನ್ನು ಸನ್ಮಾನಿಸಲಾಯಿತು. ಚೆಸ್ ತರಬೇತುದಾರ ಬಾಬು ಪೂಜಾರಿಯವರನ್ನು ಗೌರವಿಸಲಾಯಿತು. ಇಶಾ ಶರ್ಮಾ ಹಾಗೂ ಸುರೇಶ್ ಶೆಟ್ಟಿ ಗುರ್ಮೆ ಚೆಸ್ ಆಡುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.

ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಪಿ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕೆಎಂಸಿ ಮಣಿಪಾಲದ ಅಸೋಸಿಯೇಟ್ ಡೀನ್ ಡಾ. ರಾಜಗೋಪಾಲ ಶೆಣೈ, ಇಎನ್‌ಟಿ ವಿಭಾಗದ ಪ್ರಾಧ್ಯಾಪಕ ಡಾ. ಕೈಲಾಶ್ ಪೂಜಾರಿ, ಶ್ರೀನಿವಾಸ ಪೂಜಾರಿ ಕಟಪಾಡಿ, ಅಂತರಾಷ್ಟ್ರೀಯ ಮಾಸ್ಟರ್ ಅರವಿಂದ ಶಾಸ್ತ್ರಿ, ಸಂಯೋಜಕರಾದ ಉಮಾನಾಥ ಕಾಪು, ಸಾಕ್ಷಾತ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News