50ಶೇ. ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸದ ಮಹಾರಾಷ್ಟ್ರ ಪೊಲೀಸ್: ಸಮೀಕ್ಷೆ

Update: 2017-12-09 13:22 GMT

ಮುಂಬೈ, ಡಿ.9: ಮಹಾರಾಷ್ಟ್ರದ ಪೊಲೀಸ್ ಠಾಣೆಗಳಲ್ಲಿ ಶೇಕಡಾ 50 ಅಪರಾಧ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗುವುದೇ ಇಲ್ಲ ಎಂಬ ಆಘಾತಕಾರಿ ಅಂಶ ಸಮೀಕ್ಷೆಯೊಂದರಲ್ಲಿ ಬಯಲಾಗಿದೆ. ಅಪರಾಧವನ್ನು ಕ್ಷುಲ್ಲಕಗೊಳಿಸುವ ಅಥವಾ ಎಫ್‌ಐಆರ್ ದಾಖಲಿಸಲು ನಿರಾಕರಿಸುವ ಪ್ರಕರಣಗಳು ಮಹಾರಾಷ್ಟ್ರ ಪೊಲೀಸ್ ಠಾಣೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ ಎಂಬ ಅಂಶವನ್ನು ಈ ಸಮೀಕ್ಷೆ ಬಯಲು ಮಾಡಿದೆ.

ಕಳೆದ ಮೇ ತಿಂಗಳಲ್ಲಿ ಮಹಿಳೆಯೊಬ್ಬರು ನಾಸಿಕ್ ಗ್ರಾಮೀಣ ಪೊಲೀಸ್ ಠಾಣೆಗೆ ಅತ್ಯಾಚಾರ ದೂರು ದಾಖಲಿಸಲು ಆಗಮಿಸಿದ್ದರು. ಆದರೆ ಆಕೆಯ ಪ್ರಕರಣವನ್ನು ಪೊಲೀಸರು ಕೇವಲ ಲೈಂಗಿಕ ಶೋಷಣೆ ಎಂದು ದಾಖಲಿಸಿದ್ದರು. ಇದಾದ ಮೂರು ತಿಂಗಳ ನಂತರ ವಿಧಿವಿಜ್ಞಾನ ಇಲಾಖೆಯು ಆಕೆಯ ಮೇಲೆ ಅತ್ಯಾಚಾರ ನಡೆದಿರುವುದನ್ನು ದೃಢೀಕರಿಸಿದ ನಂತರ ದೂರನ್ನು ತಿರುಚಿ ಅತ್ಯಾಚಾರವೆಂದು ಬದಲಿಸಲಾಗಿತ್ತು.

ಈ ಘಟನೆಯಿಂದ ಎಚ್ಚೆತ್ತುಕೊಂಡ ರಾಜ್ಯ ಪೊಲೀಸ್ ಇಲಾಖೆ ಆಂತರಿಕ ಸಮೀಕ್ಷೆ ನಡೆಸಲು ಮುಂದಾದಾಗ ಬೆಚ್ಚಿಬೀಳಿಸುವಂತಹ ವಿಷಯಗಳು ಬೆಳಕಿಗೆ ಬಂದಿದೆ. ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಶೇಕಡಾ 50 ಅಪರಾಧ ಪ್ರಕರಣಗಳನ್ನು ಕ್ಷುಲ್ಲಕಗೊಳಿಸಲಾದರೆ ಎಫ್‌ಐಆರ್ ದಾಖಲಿಸಲು ನಿರಾಕರಿಸುವ ಪ್ರಕರಣಗಳು ಕೂಡಾ ಅಷ್ಟೇ ಇವೆ.

ಈ ಸಮೀಕ್ಷೆಯನ್ನು ನಡೆಸಲು ಮುಂದಾದ ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕರಾದ ಬಿಪಿನ್ ಬಿಹಾರಿ ಹೇಳುವಂತೆ ಪ್ರಕರಣವನ್ನು ದಾಖಲಿಸಲು ನಿರಾಕರಿಸುವುದು ಗಂಭೀರ ವಿಷಯವಾಗಿದ್ದು ಅದು ಅಪರಾಧಿ ನ್ಯಾಯ ವ್ಯವಸ್ಥೆಯನ್ನು ಹಾಳುಗೆಡವುದಕ್ಕೆ ಸಮ.

ಬಹುತೇಕ ಪ್ರಕರಣಗಳನ್ನು ಪೊಲೀಸರು ಗಂಭೀರವಲ್ಲದ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಿ ಆ ಮೂಲಕ ಪ್ರಕರಣದಲ್ಲಿ ಯಾವುದೇ ತನಿಖೆಯಾಗದಂತೆ ನೋಡಿಕೊಳ್ಳುತ್ತಾರೆ ಎಂಬುದು ಸಮೀಕ್ಷೆಯಲ್ಲಿ ಬಯಲಾಗಿದೆ.

ವಾರ್ಷಿಕ ಅಪರಾಧಗಳ ಏರಿಕೆ ಅಥವಾ ಇಳಿಕೆಯ ಅಂಕಿಅಂಶಗಳ ಮೂಲಕ ತಮ್ಮ ಇಲಾಖೆಯ ಸಾಮರ್ಥ್ಯವನ್ನು ಅಳೆಯುವಲ್ಲೇ ಸಂತುಷ್ಟರಾಗಿರುವ ಪೊಲೀಸರಿಗೆ ಇದೊಂದು ನಿತ್ಯದ ಕಾಯಕವಾಗಿದೆ. ಅಪರಾಧಗಳಲ್ಲಿ ಏರಿಕೆಯಾದರೆ ಹಿರಿಯ ಅಧಿಕಾರಿಗಳ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂದು ಹೇಳುತ್ತಾರೆ ಸಹಾಯಕ ಪೊಲೀಸ್ ಆಯುಕ್ತರು.

ಸಮೀಕ್ಷೆಯ ವರದಿಯ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸುವ ಅಥವಾ ಅಪರಾಧವನ್ನು ಕ್ಷುಲ್ಲಕಗೊಳಿಸಲು ಪ್ರಯತ್ನಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಪ್ರಧಾನ ನಿರ್ದೇಶಕರು ಏಳು ವಲಯಗಳ ಐಜಿಪಿಗಳಿಗೆ ಸೂಚಿಸಿದ್ದಾರೆ. ಈ ಸೂಚನೆಯನ್ನು ನೀಡಿದ ಒಂದು ತಿಂಗಳಲ್ಲೇ ಎಫ್‌ಐಆರ್ ದಾಖಲಾತಿಯಲ್ಲಿ 8% ಏರಿಕೆಯಾಗಿರುವುದಾಗಿ ಡಿಜಿಪಿ ಬಿಹಾರಿ ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News