ಜೆಎನ್‌ಪಿಟಿ ವಿಶೇಷ ವಿತ್ತ ವಲಯದಲ್ಲಿ ರೂ. 60,000 ಕೋಟಿ ಹೂಡಿಕೆ: ಗಡ್ಕರಿ

Update: 2017-12-09 13:55 GMT

ಮುಂಬೈ, ಡಿ.9: ದೇಶದ ಅತ್ಯಂತ ಬೃಹತ್ ಸರಕು ಸಾಗಾಟ ಬಂದರು ಜೆಎನ್‌ಪಿಟಿಗೆ ತಾಗಿಕೊಂಡಿರುವಂತೆ ನಿರ್ಮಾಣವಾಗುತ್ತಿರುವ ವಿಶೇಷ ವಿತ್ತ ವಲಯದಲ್ಲಿ 24 ಕಂಪೆನಿಗಳು ರೂ. 60,000 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿರುವುದಾಗಿ ಕೇಂದ್ರ ಬಂದರು ಸಚಿವ ನಿತೀನ್ ಗಡ್ಕರಿ ತಿಳಿಸಿದ್ದಾರೆ.

ಮನಿಕಂಟ್ರೋಲ್ ಮತ್ತು ಫ್ರೀಪ್ರೆಸ್ ಜನರಲ್ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಗಡ್ಕರಿ ಜೆಎನ್‌ಪಿಟಿ ಎಸ್‌ಇಝಡ್‌ನಲ್ಲಿ ತಮ್ಮ ಉದ್ದಿಮೆಗಳನ್ನು ಸ್ಥಾಪಿಸಲು 24 ಕಂಪೆನಿಗಳು ಮುಂದೆ ಬಂದಿರುವುದಾಗಿ ತಿಳಿಸಿದರು.

ರೂ. 60,000 ಕೋಟಿ ಹೂಡಿಕೆ ಮಾಡುವುದರ ಜೊತೆಗೆ ಈ ಉದ್ದಿಮೆಗಳ ಸ್ಥಾಪನೆಯಿಂದ 1.25ರಿಂದ 1.50 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಈ ವಿಶೇಷ ವಿತ್ತ ವಲಯಕ್ಕೆ ಅಡಿಪಾಯ ಹಾಕಿದ್ದರು ಎಂದಿ ತಿಳಿಸಿದ ಗಡ್ಕರಿ, ಈ ವಿಶೇಷ ವಿತ್ತ ವಲಯದಲ್ಲಿ ಒಂದೇ ಕಂಪೆನಿಯು ರೂ. 6,000 ಕೋಟಿ ಹೂಡಿಕೆ ಮಾಡುವುದಾಗಿ ತಿಳಿಸಿದ್ದು 40,000 ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದೆ ಎಂದು ತಿಳಿಸಿದರು.

ತೈವಾನ್ ಮೂಲಕ ಫಾಕ್ಸ್‌ಕಾನ್ ಎಂಬ ಮೊಬೈಲ್ ಫೋನ್ ಉತ್ಪಾದನಾ ಸಂಸ್ಥೆಯು ಜೆಎನ್‌ಪಿಟಿ ವಿಶೇಷ ವಿತ್ತ ವಲಯದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದ್ದು, ಇದರಿಂದ ಈ ಕ್ಷೇತ್ರದಲ್ಲಿ ಸಾವಿರಾರು ಜನರಿಗೆ ಉದ್ಯೋಗ ದೊರಕಲಿದೆ ಎಂದು ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿದ್ದವು. ಜಗತ್ತಿನ ಅತ್ಯಂತ ಪ್ರತಿಷ್ಠಿತ ಕಂಪೆನಿಗಳಲ್ಲಿ ಒಂದಾಗಿರುವ ಟೆಸ್ಲಾ ಕೂಡಾ ಇಲ್ಲಿ ಹೂಡಿಕೆ ಮಾಡಬಹುದು ಎಂದು ಸರಕಾರ ಭಾವಿಸಿತ್ತು. ಆದರೆ ಟೆಸ್ಲಾ ಇದನ್ನು ನಿರಾಕರಿಸಿದೆ.

ತನ್ನ ಸರಕು ನಿಭಾವಣೆ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುವ ಸಲುವಾಗಿ ಜೆಎನ್‌ಪಿಟಿಯಲ್ಲಿ ರೂ. 7900 ಕೋಟಿಯ ಯೋಜನೆಯನ್ನು ಜಾರಿಗೆ ತರಲಾಗಿದ್ದು ಜೆಎನ್‌ಪಿಟಿ ಕೂಡಾ 277 ಹೆಕ್ಟೇರ್ ಜಾಗದಲ್ಲಿ ನಿರ್ಮಾಣವಾಗಲಿರುವ ವಿಶೇಷ ವಿತ್ತ ವಲಯದಲ್ಲಿ ರೂ. 4,000 ಕೋಟಿ ಹೂಡಿಕೆ ಮಾಡಲಿದೆ. ಮಹಾತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯಡಿ ರೂ. 2 ಲಕ್ಷ ಕೋಟಿಯ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ಕೇವಲ ಬಂದರು-ರೈಲು ಸಂಪರ್ಕವೇ ರೂ. ಒಂದು ಲಕ್ಷ ಕೋಟಿ ಹೂಡಿಕೆಯನ್ನು ಸೆಳಯಲಿದೆ ಎಂದು ಗಡ್ಕರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News