ಸೆಮಿಫೈನಲ್ ಹಾದಿಯಲ್ಲಿ ಕರ್ನಾಟಕ

Update: 2017-12-09 18:26 GMT

ನಾಗ್ಪುರ,ಡಿ. 9: ಶ್ರೇಯಸ್ ಗೋಪಾಲ್ ಭರ್ಜರಿ ಶತಕದ ನೆರವಿನಲ್ಲಿ ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ವಿರುದ್ಧ ಮೇಲುಗೈ ಸಾಧಿಸಿದ್ದು, ಸೆಮಿಫೈನಲ್ ತಲುಪುವ ಹಾದಿಯಲ್ಲಿದೆ.

ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾಗಿರುವ ಶನಿವಾರ ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 397 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.

ದಿನದ ಆಟ ನಿಂತಾಗ ಮುಂಬೈ ತಂಡ ಎರಡನೇ ಇನಿಂಗ್ಸ್‌ನಲ್ಲಿ 44 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 120 ರನ್ ಗಳಿಸಿದೆ.

55 ರನ್ ಗಳಿಸಿರುವ ಸೂರ್ಯಕುಮಾರ್ ಯಾದವ್ ಮತ್ತು 3 ರನ್ ಗಳಿಸಿರುವ ಆಕಾಶ್ ಪಾರ್ಕರ್ ಔಟಾಗದೆ ಕ್ರೀಸ್‌ನಲ್ಲಿದ್ದರು.

 ಇನಿಂಗ್ಸ್ ಸೋಲು ತಪ್ಪಿಸಲು ಇನ್ನೂ 277 ರನ್ ಗಳಿಸಬೇಕಾಗಿದೆ. ಎರಡನೇ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡದ ಪೃಥ್ವಿ ಶಾ 14 ಮತ್ತು ಜೈ ಗೋಕುಲ್ ಬಿಸ್ತ್ ಮೊದಲ ವಿಕೆಟ್‌ಗೆ 30 ರನ್ ಸೇರಿಸಿದರು. ಮುಂಬೈ ತಂಡದ ಸ್ಕೋರ್ 9 ಓವರ್‌ಗಳಲ್ಲಿ 30ಕ್ಕೆ ಏರಿತ್ತು. 10ನೇ ಓವರ್‌ನ ಮೊದಲ ಎಸೆತದಲ್ಲಿ ಗೋಕುಲ್ ಬಿಸ್ತ್ (20) ಅವರಿಗೆ ಕೆ.ಗೌತಮ್ ಅವರು ಪೆವಿಲಿಯನ್ ಹಾದಿ ತೋರಿಸಿದರು.

 ಪೃಥ್ವಿ ಶಾ 14 ರನ್ ಗಳಿಸಿ ಶ್ರೀನಾಥ್ ಅರವಿಂದ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಮೂರನೇ ವಿಕೆಟ್‌ಗೆ ಅಖಿಲ್ ಹೆರ್ವಾಡ್ಕರ್ ಮತ್ತು ಸೂರ್ಯಕುಮಾರ್ ಯಾದವ್ 80 ರನ್‌ಗಳ ಜೊತೆಯಾಟ ನೀಡಿದರು. ಅಖಿಲ್ ಅವರು 27 ರನ್ ಗಳಿಸಿ ಗೌತಮ್ ಎಸೆತದಲ್ಲಿ ಕೆ.ಅಬ್ಬಾಸ್‌ಗೆ ಕ್ಯಾಚ್ ನೀಡಿದರು.

ಸೂರ್ಯಕುಮಾರ್ ಯಾದವ್ 115 ಎಸೆತಗಳನ್ನು ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 51 ರನ್ ಗಳಿಸಿ ಹೋರಾಟವನ್ನು ಅಂತಿಮ ದಿನಕ್ಕೆ ಕಾಯ್ದಿರಿಸಿದ್ದಾರೆ. ಕರ್ನಾಟಕದ ಕೃಷ್ಣಪ್ಪ ಗೌತಮ್ 30ಕ್ಕೆ 2 ವಿಕೆಟ್ ಹಾಗೂ ಎಸ್.ಅರವಿಂದ್ 23ಕ್ಕೆ 1 ವಿಕೆಟ್ ಪಡೆದರು.

<ಕರ್ನಾಟಕ ಮೊದಲ ಇನಿಂಗ್ಸ್ 570: ಇದಕ್ಕೂ ಮೊದಲು ಕರ್ನಾಟಕ ತಂಡ ಮೊದಲ ಇನಿಂಗ್ಸ್ ನಲ್ಲಿ 163.3 ಓವರ್‌ಗಳಲ್ಲಿ 570 ರನ್‌ಗಳಿಗೆ ಆಲೌಟಾಗಿತ್ತು. ಶ್ರೇಯಸ್ ಗೋಪಾಲ್ ಅವರು 150 ರನ್(274ಎ, 11ಬೌ) ಗಳಿಸಿ ಅಜೇಯರಾಗಿ ಉಳಿದರು.

24ರ ಹರೆಯದ ಶ್ರೇಯಸ್ ಗೋಪಾಲ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ದಾಖಲಿಸಿದರು.

ಇವರನ್ನು ಹೊರತುಪಡಿಸಿದರೆ ಕರ್ನಾಟಕದ ನಾಲ್ವರು ದಾಂಡಿಗರಾದ ಮಾಯಾಂಕ್ ಅಗರ್‌ವಾಲ್(78), ಮಿರ್ ಕೌನಿನ್ ಅಬ್ಬಾಸ್(50), ಶ್ರೀನಿವಾಸ್ ಅರವಿಂದ್(51), ವಿಕೆಟ್ ಕೀಪರ್ ಸಿ.ಎಂ.ಗೌತಮ್(79) ಅರ್ಧಶತಕ ದಾಖಲಿಸಿದರು.

ಕರ್ನಾಟಕ ಎರಡನೇ ದಿನದಾಟದಂತ್ಯಕ್ಕೆ 122 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 395 ರನ್ ಗಳಿಸಿತ್ತು.

ಎಸ್.ಗೋಪಾಲ್ ಔಟಾಗದೆ 80 ರನ್ ಮತ್ತು ಆರ್.ವಿನಯ್ ಕುಮಾರ್ 31 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇವರು ಬ್ಯಾಟಿಂಗ್ ಮುಂದುವರಿಸಿ 84 ರನ್ ಸೇರಿಸಿದರು. ವಿನಯ್ ಕುಮಾರ್ 37 ರನ್ ಗಳಿಸಿ ಔಟಾದರು. ಆಗ ತಂಡದ ಸ್ಕೋರ್ 125.4 ಓವರ್‌ಗಳಲ್ಲಿ 405 ತಲುಪಿತ್ತು.

 ಏಳನೆ ವಿಕೆಟ್‌ಗೆ ಗೌತಮ್ (38) ಮತ್ತು ಗೋಪಾಲ್ ಜೊತೆಯಾಟದಲ್ಲಿ 73 ರನ್ ಸೇರಿಸಿದರು. ಅಂತಿಮ ವಿಕೆಟ್‌ಗೆ ಗೋಪಾಲ್ ಮತ್ತು ಶ್ರೀನಾಥ್ ಅರವಿಂದ್(51) ಅವರು 92ರನ್ ಸೇರಿಸುವ ಮೂಲಕ ಕರ್ನಾಟಕದ ಸ್ಕೋರ್‌ನ್ನು 570ಕ್ಕೆ ತಲುಪಿಸಿದರು.

ಮುಂಬೈ ತಂಡದ ಶಿವಮ್ ದುಬೆ 98ಕ್ಕೆ 5,ಶಿವಮ್ ಮಲ್ಹೋತ್ರಾ 97ಕ್ಕೆ 3 ಮತ್ತು ಧವಳ್ ಕುಲಕರ್ಣಿ 105ಕ್ಕೆ 2 ವಿಕೆಟ್ ಪಡೆದರು.

►ಸಂಕ್ಷಿಪ್ತ ಸ್ಕೋರ್ ವಿವರ

►ಮುಂಬೈ ಮೊದಲ ಇನಿಂಗ್ಸ್ 173

►ಕರ್ನಾಟಕ ಮೊದಲ ಇನಿಂಗ್ಸ್ 163.3 ಓವರ್‌ಗಳಲ್ಲಿ ಆಲೌಟ್ 570(ಶ್ರೇಯಸ್ ಗೋಪಾಲ್ ಔಟಾಗದೆ 150, ಅಗರ್‌ವಾಲ್ 78, ಗೌತಮ್ 79, ಅರವಿಂದ್ 51,ಅಬ್ಬಾಸ್ 50; ದುಬೆ 98ಕ್ಕೆ 5,ಶಿವಮ್ ಮಲ್ಹೋತ್ರಾ 97ಕ್ಕೆ 3 )

►ಮುಂಬೈ ದ್ವಿತೀಯ ಇನಿಂಗ್ಸ್ 44 ಓವರ್‌ಗಳಲ್ಲಿ 120/3( ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ 55; ಗೌತಮ್ 30ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News