ಏರ್ ಇಂಡಿಯಾಗೆ ಸರಿಯಾದ ಖಾಸಗಿಕರಣ ಪ್ರಕ್ರಿಯೆಯನ್ನು ಆರಿಸಿ: ಐಎಟಿಎ ಮುಖ್ಯಸ್ಥ

Update: 2017-12-10 13:56 GMT

ಜಿನಿವಾ, ಡಿ.10: ಏರ್ ಇಂಡಿಯಾವನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಲು ಸರಿಯಾದ ಖಾಸಗಿಕರಣ ಪ್ರಕ್ರಿಯೆಯನ್ನು ಆರಿಸಬೇಕು ಎಂದು ಸಲಹೆ ನೀಡಿರುವ ಐಎಟಿಎ ಮುಖ್ಯಸ್ಥ ಅಲೆಕ್ಸಾಂಡರ್ ಡಿ ಜುನೈಕ್ ಸರಕಾರ ಏರ್ ಇಂಡಿಯಾದಲ್ಲಿ ಪಾಲನ್ನು ಹೊಂದುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾದ ಶೇರುಗಳನ್ನು ಮಾರಾಟ ಮಾಡಲು ಮುಂದಾಗಿರುವ ಸರಕಾರದ ನಿರ್ಧಾರವನ್ನು ಬೆಂಬಲಿಸಿದ ಜುನೈಕ್ ಏರ್ ಇಂಡಿಯಾ ಇತರ ವಾಯುಯಾನ ಸಂಸ್ಥೆಗಳ ಜೊತೆ ಪೈಪೋಟಿ ನಡೆಸಲು ಅದಕ್ಕೆ ಸರಿಯಾದ ಬದಲಾವಣೆಗಳನ್ನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಏರ್ ಇಂಡಿಯಾವು ಅಂತಾರಾಷ್ಟ್ರೀಯ ವಾಯುಯಾನ ಸಂಘ (ಐಎಟಿಎ) ದ ಸದಸ್ಯತ್ವ ಹೊಂದಿದೆ. ಜಗತ್ತಿನಾದ್ಯಂತ 275 ವಾಯುಯಾನ ಸಂಸ್ಥೆಗಳು ಐಎಟಿಎ ಸದಸ್ಯತ್ವವನ್ನು ಹೊಂದಿದೆ.

ಏರ್ ಇಂಡಿಯಾದ ಖಾಸಗಿಕರಣವನ್ನು ನಾವು ಬೆಂಬಲಿಸುತ್ತೇವೆ. ಆದರೆ ಈ ಖಾಸಗಿಕರಣದಿಂದ ಸಂಸ್ಥೆಯು ಇತರ ವಾಯುಯಾನ ಸಂಸ್ಥೆಗಳ ಜೊತೆ ಸಮರ್ಥವಾಗಿ ಪೈಪೋಟಿ ನಡೆಸಲು ಸಾಧ್ಯವಾಗಬೇಕು ಎಂದು ಜುನೈಕ್ ತಿಳಿಸಿದ್ದಾರೆ. ಭಾರತದ ಪ್ರಮುಖ ವಾಯುಯಾನ ಸಂಸ್ಥೆಗಳಲ್ಲಿ ಒಂದಾಗಿರುವ ಏರ್ ಇಂಡಿಯಾದ ಮೇಲೆ ಈಗಾಗಲೇ ರೂ. 50,000 ಕೋಟಿ ಸಾಲದ ಹೊರೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News