ಬಿಜೆಪಿಗೆ ನೋಟು ಬ್ಯಾನ್ ಪರಿಣಾಮ ಗುಜರಾತ್‌ನಲ್ಲಿ ತಿಳಿಯಲಿದೆ: ಅಖಿಲೇಶ್ ಯಾದವ್

Update: 2017-12-10 16:08 GMT

ಲಕ್ನೊ, ಡಿ.10: ನೋಟು ಅಮಾನ್ಯ ಮತ್ತು ಜಿಎಸ್‌ಟಿಯ ಪರಿಣಾಮವನ್ನು ಬಿಜೆಪಿಯು ಗುಜರಾತ್ ಚುನಾವಣೆಯ ಫಲಿತಾಂಶದಲ್ಲಿ ನೋಡಲಿದೆ. ಅಲ್ಲಿನ ಜನರು ಬಿಜೆಪಿ ವಿರುದ್ಧ ಎದ್ದುನಿಲ್ಲಲು ನಿರ್ಧರಿಸಿದ್ದಾರೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಿಳಿಸಿದ್ದಾರೆ. ಬಿಜೆಪಿಯ ನೀತಿಗಳು ರೈತ ಮತ್ತು ವ್ಯಾಪಾರಿಗಳ ವಿರೋಧಿಯಾಗಿರುವ ಕಾರಣ ಅವರ ಮತಗಳಲ್ಲಿ ಗಣನೀಯ ಇಳಿಕೆ ಕಾಣಲಿದೆ ಎಂದು ಅಖಿಲೇಶ್ ಭವಿಷ್ಯ ನುಡಿದಿದ್ದಾರೆ. ನೋಟು ಅಮಾನ್ಯ ಮತ್ತು ಜಿಎಸ್‌ಟಿ ವ್ಯಾಪಾರಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಮತ್ತು ಇದರಿಂದಾಗಿ ವ್ಯಾಪಾರ ಮತ್ತು ಆರ್ಥಿಕತೆ ಕುಸಿದಿದೆ. ಗುಜರಾತ್ ಚುನಾವಣೆಯಲ್ಲಿ ಇದರ ಫಲವನ್ನು ಬಿಜೆಪಿ ಅನುಭವಿಸಲಿದೆ ಎಂದು ಅಖಿಲೇಶ್ ಪಕ್ಷದ ಮುಖ್ಯಕಚೇರಿಯಲ್ಲಿ ನಡೆದ ವ್ಯಾಪಾರಿಗಳ ಸಮಾವೇಶದಲ್ಲಿ ತಿಳಿಸಿದರು. ಉತ್ತರ ಪ್ರದೇಶದಲ್ಲೂ ಸಣ್ಣ ನಗರಗಳು ಮತ್ತು ಗ್ರಾಮೀಣ ಭಾಗಗಳಲ್ಲಿ ಬಿಜೆಪಿ ಕಳಪೆ ಪ್ರದರ್ಶನ ನೀಡಿದೆ ಎಂಬುದನ್ನು ಅವರು ಬೊಟ್ಟು ಮಾಡಿದರು.

ಮಥುರಾ, ಫೈಝಾಬಾದ್ ಮತ್ತು ಸೀತಾಪುರ್‌ನಲ್ಲಿ ನಡೆದ ಅಪರಾಧಿ ಪ್ರಕರಣಗಳನ್ನು ಉಲ್ಲೇಖಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ತಿಳಿಸಿದ ಉ.ಪ್ರದೇಶದ ಮಾಜಿ ಮುಖ್ಯಮಂತ್ರಿ ವ್ಯಾಪಾರಿಗಳ ಹಿತಾಸಕ್ತಿ ಕಾಪಾಡಲು ಸಮಾಜವಾದಿ ಪಕ್ಷ ಕಟಿಬದ್ಧವಾಗಿದೆ ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಪಿ ಮುಖಂಡ ರಾಮ್‌ಗೋಪಾಲ್ ಯಾದವ್, ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರದ ಆರ್ಥಿಕ ನೀತಿಗಳ ಪರಿಣಾಮವಾಗಿ ಉದ್ಯೋಗಪತಿಗಳು ದೇಶವನ್ನು ತೊರೆಯುತ್ತಿದ್ದಾರೆ. ಬಿಜೆಪಿ ಸರಕಾರ ಅಧಿಕಾರದಿಂದ ಇಳಿದ ನಂತರವಷ್ಟೇ ಮತ್ತೆ ಮರಳುವುದಾಗಿ ಅವರು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯು ಗುಜರಾತ್‌ನಲ್ಲಿ ಸೋಲುತ್ತಿದೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಅದನ್ನು ಮಣಿಸಲು ಉತ್ತರ ಪ್ರದೇಶದಲ್ಲೂ ಅದಕ್ಕೆ ಸೋಲುಣಿಸುವುದರಿಂದ ಮಾತ್ರ ಸಾಧ್ಯ. ಬಿಜೆಪಿ ಅಧಿಕಾರ ಕೊನೆಗೊಂಡಾಗ ರಾಮರಾಜ್ಯ ಸ್ಥಾಪನೆಯಾಗುವುದು ಎಂದು ರಾಮ್‌ಗೋಪಾಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News