ಸೌದಿ ಬದಲಾದರೆ ಉತ್ತಮ ಸಂಬಂಧ ಈಗಲೂ ಸಾಧ್ಯ: ಇರಾನ್

Update: 2017-12-10 16:53 GMT

ಟೆಹರಾನ್ (ಇರಾನ್), ಡಿ. 10: ಯಮನ್‌ನಲ್ಲಿ ಬಾಂಬ್ ದಾಳಿ ನಡೆಸುವುದನ್ನು ನಿಲ್ಲಿಸಿದರೆ ಹಾಗೂ ಇಸ್ರೇಲ್‌ನೊಂದಿಗೆ ಹೊಂದಿದೆಯೆನ್ನಲಾದ ಸಂಬಂಧವನ್ನು ತೊರೆದರೆ ಸೌದಿ ಅರೇಬಿಯದೊಂದಿಗಿನ ಸಂಬಂಧವನ್ನು ಪುನಃಸ್ಥಾಪಿಸಲು ಇರಾನ್ ಸಿದ್ಧವಾಗಿದೆ ಎಂದು ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ.

ಯಮನ್‌ನಲ್ಲಿ ಇರಾನ್ ಬೆಂಬಲಿತ ಹೌದಿ ಬಂಡುಕೋರರ ವಿರುದ್ಧ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳು ದಾಳಿ ನಡೆಸುತ್ತಿವೆ.

ಭಿನ್ನಮತೀಯ ಶಿಯಾ ಧರ್ಮಗುರುವೊಬ್ಬರನ್ನು ಸೌದಿ ಅರೇಬಿಯ ಗಲ್ಲಿಗೇರಿಸಿರುವುದನ್ನು ಪ್ರತಿಭಟಿಸಿ, ಇರಾನ್ ರಾಜಧಾನಿ ಟೆಹರಾನ್‌ನಲ್ಲಿದ್ದ ಸೌದಿ ಅರೇಬಿಯದ ರಾಜತಾಂತ್ರಿಕ ಕಚೇರಿಗಳ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿದ ಬಳಿಕ 2016ರ ಜನವರಿಯಲ್ಲಿ ಸೌದಿ ಅರೇಬಿಯವು ಇರಾನ್‌ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತ್ತು.

ಕಳೆದ ತಿಂಗಳು ಸೌದಿ ರಾಜಧಾನಿ ರಿಯಾದ್‌ನತ್ತ ಹೌದಿ ಬಂಡುಕೋರರು ಯಮನ್‌ನಿಂದ ಕ್ಷಿಪಣಿ ಹಾರಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತ್ತು. ಕ್ಷಿಪಣಿ ನಿಗ್ರಹ ವ್ಯವಸ್ಥೆಯ ಸಹಾಯದಿಂದ ಕ್ಷಿಪಣಿ ತನ್ನ ಗುರಿಯನ್ನು ತಲುಪುವ ಮೊದಲೇ ತುಂಡರಿಸಲಾಗಿತ್ತು.

ಸೌದಿ ಅರೇಬಿಯವು ಇಸ್ರೇಲನ್ನು ಮಾನ್ಯ ಮಾಡುವುದಿಲ್ಲ. ಆದರೆ, ಇರಾನನ್ನು ನಿಭಾಯಿಸುವುದಕ್ಕೆ ಸಂಬಂಧಿಸಿ ಈ ಎರಡು ದೇಶಗಳು ಸಮಾನ ಹಿತಾಸಕ್ತಿ ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News