ಕರ್ನಾಟಕ ಸೆಮಿಫೈನಲ್‌ಗೆ ಪ್ರವೇಶ

Update: 2017-12-10 18:11 GMT

ನಾಗ್ಪುರ,ಡಿ. 10: ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಲ್ಲಿ ಮುಂಬೈ ವಿರುದ್ಧ ಕರ್ನಾಟಕ ತಂಡ ಇನಿಂಗ್ಸ್ ಹಾಗೂ 20 ರನ್‌ಗಳ ಜಯ ಗಳಿಸಿದ್ದು, ಸೆಮಿಫೈನಲ್ ಪ್ರವೇಶಿಸಿದೆ.

  ವಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನವಾಗಿರುವ ರವಿವಾರ ಮುಂಬೈ ತಂಡ ಎರಡನೇ ಇನಿಂಗ್ಸ್ ನಲ್ಲಿ ಕೃಷ್ಣಪ್ಪ ಗೌತಮ್(106ಕ್ಕೆ 6) ದಾಳಿಗೆ ಸಿಲುಕಿ 114.5 ಓವರ್‌ಗಳಲ್ಲಿ 377 ರನ್‌ಗಳಿಗೆ ಆಲೌಟಾಗುವುದರೊಂದಿಗೆ ಕರ್ನಾಟಕ ಭರ್ಜರಿ ಗೆಲುವಿನ ನಗೆ ಬೀರಿತು.

      ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 163.3 ಓವರ್‌ಗಳಲ್ಲಿ ಆಲೌಟಾಗಿ 570 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮುಂಬೈ ತಂಡ ಮೊದಲ ಇನಿಂಗ್ಸ್‌ನಲ್ಲಿ 173 ರನ್‌ಗಳಿಸಿತ್ತು. ಇದರೊಂದಿಗೆ ಕರ್ನಾಟಕ ತಂಡ 397 ರನ್‌ಗಳ ಮುನ್ನಡೆ ಸಾಧಿಸಿತ್ತು.

 ಮೂರನೇ ದಿನವಾಗಿದ್ದ ಶನಿವಾರ ಆಟ ನಿಂತಾಗ ಮುಂಬೈ ತಂಡ ಎರಡನೇ ಇನಿಂಗ್ಸ್‌ನಲ್ಲಿ 44 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 120 ರನ್ ಗಳಿಸಿತ್ತು. 55 ರನ್ ಗಳಿಸಿರುವ ಸೂರ್ಯಕುಮಾರ್ ಯಾದವ್ ಮತ್ತು 3 ರನ್ ಗಳಿಸಿರುವ ಆಕಾಶ್ ಪಾರ್ಕರ್ ಔಟಾಗದೆ ಕ್ರೀಸ್‌ನಲ್ಲಿದ್ದರು.

ಇನಿಂಗ್ಸ್ ಸೋಲು ತಪ್ಪಿಸಲು 277 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ ಅಂತಿಮ ದಿನ ಈ ಮೊತ್ತಕ್ಕೆ 257 ರನ್ ಸೇರಿಸಿದರೂ, ಇನಿಂಗ್ಸ್ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ 41 ಬಾರಿ ಟ್ರೋಫಿ ಜಯಿಸಿದ್ದ ಮುಂಬೈ ಕ್ವಾರ್ಟರ್ ಫೈನಲ್‌ನಲ್ಲಿ ಅಭಿಯನ ಕೊನೆಗೊಳಿಸಿ ಕೂಟದಿಂದ ಹೊರ ನಡೆಯಿತು.

  ಸೂರ್ಯಕುಮಾರ್ ಯಾದವ್ ಮತ್ತು ಆಕಾಶ್ ಪಾರ್ಕರ್ ಬ್ಯಾಟಿಂಗ್ ಮುಂದುವರಿಸಿ ನಾಲ್ಕನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟ ನೀಡಿದರು. ಸೂರ್ಯಕುಮಾರ್ ಯಾದವ್ ಶತಕ ಮತ್ತು ಪಾರ್ಕರ್ ಅರ್ಧಶತಕ ದಾಖಲಿಸಿದರು.

  ಸೂರ್ಯಕುಮಾರ್ ಯಾದವ್ 180 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ 108 ರನ್ ಗಳಿಸಿ ರನೌಟಾದರು. ಆಗ ಮುಂಬೈ ತಂಡ 68.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 212 ರನ್ ಗಳಿಸಿತ್ತು. ಬಳಿಕ ಸಿದ್ಧಾರ್ಥ ಲಾಡ್ ಅವರು ಪಾರ್ಕರ್‌ಗೆ ಜೊತೆಯಾದರು. ಇವರ ಜೊತೆಯಾಟದಲ್ಲಿ 52 ರನ್ ಸೇರಿಸಿದರು. ಲಾಡ್ 31 ರನ್ ಗಳಿಸಿದರು. ನಾಯಕ ಹಾಗೂ ವಿಕೆಟ್ ಕೀಪರ್ ಆದಿತ್ಯ ತಾರೆೆ ಅವರನ್ನು ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಖಾತೆ ತೆರೆಯಲು ಅವಕಾಶ ನೀಡದೆ ವಾಪಸ್ ಕಳುಹಿಸಿದರು. ಸ್ಕೋರ್ 295 ತಲುಪುವಾಗ ಪಾರ್ಕರ್ ಬ್ಯಾಟಿಂಗ್ ಮುಗಿಸಿದರು. ಪಾರ್ಕರ್ 65 ರನ್ ಗಳಿಸಿ ಗೌತಮ್ ಬೌಲಿಂಗ್‌ನಲ್ಲಿ ನಾಯರ್‌ಗೆ ಕ್ಯಾಚ್ ನೀಡಿದರು. ಧವಳ್ ಕುಲಕರ್ಣಿ 15 ರನ್ ಗಳಿಸಿದರು. ಅಂತಿಮ ವಿಕೆಟ್‌ಗೆ ಶಿವಮ್ ದುಬೆ ಮತ್ತು ಶಿವಮ್ ಮಲ್ಹೋತ್ರಾ 44 ರನ್‌ಗಳ ಕಾಣಿಕೆ ನೀಡಿದರು. ದುಬೆ 71 ರನ್(91ಎ, 7ಬೌ,4ಸಿ) ಗಳಿಸಿ ಗೌತಮ್ ಎಸೆತದಲ್ಲಿ ಸಮರ್ಥಗೆ ಕ್ಯಾಚ್ ನೀಡುವುದರೊಂದಿಗೆ ಮುಂಬೈ ತಂಡದ ಇನಿಂಗ್ಸ್ ಮುಕ್ತಾಯಗೊಂಡಿತು. ಕರ್ನಾಟಕ ತಂಡದ ಕೃಷ್ಣಪ್ಪ ಗೌತಮ್ 104ಕ್ಕೆ 6 ವಿಕೆಟ್, ವಿನಯ್ ಕುಮಾರ್ 45ಕ್ಕೆ 2 ವಿಕೆಟ್ ಮತ್ತು ಶ್ರೀನಾಥ್ ಅರವಿಂದ 40ಕ್ಕೆ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್ ವಿವರ

►ಮುಂಬೈ ಮೊದಲ ಇನಿಂಗ್ಸ್ 173

►ಕರ್ನಾಟಕ ಮೊದಲ ಇನಿಂಗ್ಸ್ 163.3 ಓವರ್‌ಗಳಲ್ಲಿ ಆಲೌಟ್ 570(ಶ್ರೇಯಸ್ ಗೋಪಾಲ್ ಔಟಾಗದೆ 150, ಅಗರ್‌ವಾಲ್ 78, ಗೌತಮ್ 79, ಅರವಿಂದ್ 51,ಅಬ್ಬಾಸ್ 50; ದುಬೆ 98ಕ್ಕೆ 5,ಶಿವಮ್ ಮಲ್ಹೋತ್ರಾ 97ಕ್ಕೆ 3 )

►ಮುಂಬೈ ದ್ವಿತೀಯ ಇನಿಂಗ್ಸ್ 114.5 ಓವರ್‌ಗಳಲ್ಲಿ ಆಲೌಟ್ 377( ಸೂರ್ಯಕುಮಾರ್ ಯಾದವ್ 108, ದುಬೆ 71, ಪಾರ್ಕರ್ 65; ಗೌತಮ್ 104ಕ್ಕೆ 6, ವಿನಯ್ ಕುಮಾರ್ 45ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News