ಜಾಗೃತ ಸಮಾಜದಿಂದ ಅಪರಾಧ ಪ್ರಮಾಣ ಇಳಿಮುಖ: ಎಸ್ಪಿ ಪಾಟೀಲ್

Update: 2017-12-11 10:30 GMT

ಉಡುಪಿ, ಡಿ.11: ಜಾಗೃತ ಸಮಾಜದಿಂದ ಅಪರಾಧ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯ. ಆದುದರಿಂದ ಸಾರ್ವಜನಿಕರು ನಿಭೀರ್ತಿಯಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಎಂ.ಪಾಟೀಲ್ ಹೇಳಿದ್ದಾರೆ.

ಉದ್ಯಾವರ ಎಂಇಟಿ ಪಬ್ಲಿಕ್ ಸ್ಕೂಲ್, ಉಡುಪಿ ನಗರ ಹಾಗೂ ಮಹಿಳಾ ಪೊಲೀಸ್ ಠಾಣೆಯ ಆಶ್ರಯದಲ್ಲಿ ರೋಟರಿ ಅಂಬಲಪಾಡಿ, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ, ಜೆಸಿಐ ಕಾಪು ಇವುಗಳ ಸಹಯೋಗದೊಂದಿಗೆ ಉಡುಪಿ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಸೋಮವಾರ ಆಯೋಜಿಸಲಾದ ಅಪರಾಧ ತಡೆ ಮಾಸಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯ ಕ್ರಮವನ್ನು ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಳ್ಳಲಾಗುವುದು. ನಗರದ ಶಾಲಾ ವಿದ್ಯಾರ್ಥಿಗಳನ್ನು ಸುತ್ತಮುತ್ತಲಿನ ಪೊಲೀಸ್ ಠಾಣೆಗೆ ಕರೆಸಿ ಠಾಣೆಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಪ್ರತಿ ಶಾಲೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯ ವಾಗಿದೆ. ಶಾಲಾ ಮಕ್ಕಳು ಯಾವುದೇ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೂ ಅದನ್ನು ಶಿಕ್ಷಕರು ಗಂಭೀರವಾಗಿ ಪರಿಗಣಿಸಿ ಪೊಲೀಸರಿಗೆ ತಿಳಿಸಬೇಕು. ಅದು ಯಾವುದೇ ಇಲಾಖೆಗೆ ಸಂಬಂಧಪಟ್ಟದ್ದೆ ಆದರೂ ಅದನ್ನು ನಾವು ಆಯಾ ಇಲಾಖೆಗೆ ತಿಳಿಸುವ ಕೆಲಸ ಮಾಡುತ್ತೇವೆ ಎಂದರು.

ಅಧ್ಯಕ್ಷತೆಯನ್ನು ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಆಡಳಿತ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ರೋಟರಿ ಅಧ್ಯಕ್ಷ ದಶರಥ ಸಿಂಗ್ ಚೌಹಾಣ್, ಲಯನ್ಸ್ ಅಧ್ಯಕ್ಷ ದಿವಾಕರ ಶೆಟ್ಟಿ, ಎಂಇಟಿ ಸ್ಕೂಲ್‌ನ ಟ್ರಸ್ಟಿ ಹಾಜಿ ಅಬ್ದುಲ್ಲ ಪರ್ಕಳ ಉಪಸ್ಥಿತರಿದ್ದರು.

ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಎಸ್.ಜೆ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ನಗರ ಠಾಣೆಯ ಉಪನಿರೀಕ್ಷಕ ಅನಂತ ಪದ್ಮನಾಭ ವಂದಿಸಿದರು. ಎಂಇಟಿ ಸ್ಕೂಲ್‌ನ ಆಡಳಿತಾಧಿಕಾರಿ ಖಲೀಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಉಡುಪಿ ನಗರ ಪೊಲೀಸ್ ಠಾಣೆಯ ಎದುರು ತಂಬಾಕು ನಿಷೇಧ ರ್ಯಾಲಿಗೆ ಎಸ್ಪಿ ಡಾ.ಸಂಜೀವ ಎಂ.ಪಾಟೀಲ್ ಚಾಲನೆ ನೀಡಿದರು. ಅಲ್ಲಿಂದ ಆರಂಭಗೊಂಡ ಎಂಇಟಿ ಹಾಗೂ ಕ್ರಿಶ್ಚಿಯನ್ ಹೈಸ್ಕೂಲ್‌ನ ನೂರಾರು ವಿದ್ಯಾರ್ಥಿಗಳ ರ್ಯಾಲಿ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಬೋರ್ಡ್ ಹೈಸ್ಕೂಲ್ ಎದುರು ಸಮಾಪ್ತಿಗೊಂಡಿತು.

 

ಮಕ್ಕಳಿಗೆ ಎಸ್ಪಿ ಕಾನೂನು ಪಾಠ
ಯಾವುದೇ ಸಮಸ್ಯೆಗಳಾದರೂ ಪೊಲೀಸ್ ಕಂಟ್ರೋಲ್ ರೂಂ 100ಗೆ ಕರೆ ಮಾಡಿ. ಮುಂದೆ 100 ನಿಮ್ಮ ಆಪ್ತ ಮಿತ್ರ ಆಗಲಿದೆ ಎಂದು ಎಸ್ಪಿ ಡಾ. ಸಂಜೀವ ಎಂ.ಪಾಟೀಲ್ ಮಕ್ಕಳಿಗೆ ಕಿವಿಮಾತು ಹೇಳಿದರು.
ತಮ್ಮ ನೆರೆಮನೆಗಳಲ್ಲಿರುವ ಪ್ರತಿಯೊಬ್ಬರು ಹೆಸರನ್ನು ತಿಳಿದುಕೊಂಡಿರಬೇಕು. ಅಲ್ಲಿಗೆ ಹೊಸಬರು ಬಂದರೆ ಅವರ ಬಗ್ಗೆ ಪೋಷಕರಿಗೆ ಮಾಹಿತಿ ನೀಡಬೇಕು. ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿ ಯಾರಾದರೂ ಕಿರುಕುಳ ನೀಡಿದರೆ ಕೂಡಲೇ ಶಿಕ್ಷಕರಿಗೆ ಅಥವಾ ಪೋಷಕರಿಗೆ ತಿಳಿಸಬೇಕು. ಫೋನ್ ಮೂಲಕ ಕಿರುಕುಳ ನೀಡಿದರೂ ಅದು ಅಪರಾಧವಾಗುವುದರಿಂದ ಆ ಬಗ್ಗೆ ಪೋಷಕರ ಮೂಲಕ ಪೊಲೀಸರಿಗೆ ತಿಳಿಸಬೇಕು. ಶಾಲೆಯ ವರಾಠದಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದರೆ ಅಥವಾ 18ವರ್ಷದೊಳಗಿನ ಮಕ್ಕಳಿಗೆ ತಂಬಾಕು ಮಾರಾಟ ಮಾಡಿದರೆ ಕೂಡಲೇ 100ಗೆ ಕರೆ ಮಾಡಿ ತಿಳಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News