ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ಗೌರವಿಸಿ: ಶಿವಾನಂದ ಕಾಪಶಿ

Update: 2017-12-11 10:34 GMT

ಉಡುಪಿ, ಡಿ.11: ಸಂವಿಧಾನ ಪ್ರತಿಯೊಬ್ಬ ನಾಗರಿಕರಿನಿಗೂ ಹಕ್ಕುಗಳನ್ನು ನೀಡಿದ್ದು, ತಮಗೆ ನೀಡಿದ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಜೊತೆಗೆ, ಬೇರೆಯವರ ಹಕ್ಕುಗಳನ್ನು ಗೌರವಿಸುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ತಡೆಯಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.

ಅವರು ಸೋಮವಾರ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ವಕೀಲರ ಸಂಘ ಉಡುಪಿ , ಜಾಗೃತಿ ಜನಸೇವಾ ಸಂಸ್ಥೆ ತೋನ್ಸೆ ಮತ್ತು ಸಾಲಿಹತ್ ಮಹಿಳಾ ಪದವಿ ಕಾಲೇಜು ಹೂಡೆ ಇವರ ಸಹಯೋಗದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಶಾಂತಿ ಸೂಚಕವಾದ ಪಾರಿವಾಳಗಳನ್ನು ಹರಿಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವ ಸಂಘಜೀವಿಯಾಗಿದ್ದು, ಸಮಾಜದಲ್ಲಿ ಸಂಘಟಿತ ಜೀವನ ಅನಿವಾರ್ಯ, ಈ ಸಂದರ್ಭದಲ್ಲಿ ಇತರರ ಹಕ್ಕುಗಳನ್ನು ಉಲ್ಲಂಘಿಸದೆ , ಅವುಗಳನ್ನು ಗೌರವಿಸಬೇಕು, ಮಾನವ ಹಕ್ಕುಗಳ ಕುರಿತು ಸಮಾಜದ ಪ್ರತಿಯೊಬ್ಬರೂ ನಾಗರಿಕರೂ ಅರಿತಿರಬೇಕು, ಮಾನವ ಹಕ್ಕುಗಳನ್ನು ಗೌರವಿಸುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯದ ಜೀವನ ಸಾಧ್ಯವಾಗಲಿದೆ ಎಂದು ಕಾಪಶಿ ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮಾತನಾಡಿ, ಮಾನವ ಹಕ್ಕುಗಳನ್ನು ಅರಿಯುವ ಜೊತೆಗೆ, ಅದರ ಉಲ್ಲಂಘನೆಗೆ ಇರುವ ಶಿಕ್ಷೆಯ ಕುರಿತ ಸಹ ಅರಿತಿರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಮಾನವ ಹಕ್ಕುಗಳ ದಿನದ ಪ್ರತಿಜ್ಞೆ ಭೋದಿಸಿ, ನಾವು ಬದುಕುಬೇಕು, ಇನ್ನೊಬ್ಬರನ್ನೂ ಬದುಕುಲು ಬಿಡಬೇಕು ಇದೇ ಮಾನವ ಹಕ್ಕುಗಳ ಪ್ರಮುಖ ಸಂದೇಶ ಎಂದು ಹೇಳಿದರು.

ಜಾಗೃತಿ ಜನಸೇವಾ ಸಂಸ್ಥೆಯ ಸಂಚಾಲಕ, ವೆಂಕಟೇಶ್ ಜಿ.ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಹಮ್ಜತ್ ಹೆಜಮಾಡಿ ಕೋಡಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ತೋನ್ಸೆ ಗ್ರಾಮ ಪಂಚಾಯತ್ ಅದ್ಯಕ್ಷೆ ಫೌಝಿಯಾ ಸಾದಿಕ್, ತಾ.ಪಂ. ಸದಸ್ಯೆ ಸುಲೋಚನಾ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮಿ , ಜಿಲ್ಲಾಧಿಕಾರಿ ಕಚೇರಿಯ ಅಧೀಕ್ಷಕ ಸಂಪತ್, ಉಡುಪಿ ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಮಾನವ ಹಕ್ಕು ಆಯೋಗದ ಸದಸ್ಯ ಇನ್ನಾ ಉದಯ ಕುಮಾರ್ ಶೆಟ್ಟಿ, ಸಾಲಿಹತ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರಿಸ್ ಹೂಡೆ, ಪ್ರಾಂಶುಪಾಲೆ ಡಾ. ಸಲೀನಾ, ಮತ್ತಿತರರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಅಸ್ಲಾಂ ಬೈಕಾಡಿ ಸ್ವಾಗತಿಸಿದರು, ಶೋಯೆಬ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News