ಬೆಂಗ್ರೆಯಲ್ಲಿ ಪದವಿಪೂರ್ವ ಕಾಲೇಜು ಸ್ಥಾಪಿಸಲು ಒತ್ತಾಯಿಸಿ ಶಾಸಕರಿಗೆ ಎಸ್ಐಒ ಮನವಿ

Update: 2017-12-11 12:42 GMT

ಮಂಗಳೂರು, ಡಿ. 11: ನಗರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಕಸಬಾ ಬೆಂಗ್ರೆ ಪ್ರದೇಶದಲ್ಲಿ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ಅವರಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ ಬೆಂಗ್ರೆ ಶಾಖೆಯ ವತಿಯಿಂದ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮವೊಂದರಲ್ಲಿ ಅತಿಥಿಯಾಗಿ ಬೆಂಗ್ರೆಗೆ ಆಗಮಿಸಿದ್ದ ಸಂದರ್ಭ ಶಾಸಕ ಲೋಬೊ ಅವರಿಗೆ ಮನವಿ ಸಲ್ಲಿಸಿದ ಎಸ್ ಐ ಒ ಬೆಂಗ್ರೆ ನಿಯೋಗವು, ಬೆಂಗರೆ ಪ್ರದೇಶದಲ್ಲಿ ಸುಮಾರು 35,000 ದಷ್ಟು ಸಂಖ್ಯೆಯ ಜನರು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿರುವವರಿಗೆ ಸಾರಿಗೆಗೆ ಬೋಟ್ ವ್ಯವಸ್ಥೆಯೊಂದು ಬಿಟ್ಟರೆ ಬೇರೆ ಪರ್ಯಾಯ ಸಾರಿಗೆ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ಬೆಂಗ್ರೆಯ ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಹತ್ತಲು ಮಂಗಳೂರು ನಗರವನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಬೆಂಗರೆ ಪ್ರದೇಶಕ್ಕೆ ಪಿಯು ಕಾಲೇಜು ಸ್ಥಾಪನೆಗಾಗಿ ಮುತುವರ್ಜಿ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದೆ.

ಈ ಹಿಂದೆ ಬೋಟಿನಲ್ಲಿ ಪ್ರಯಾಣಿಸುವ ವೇಳೆ ದುರ್ಘಟನೆ ಸಂಭವಿಸಿ, ಹಲವಾರು ವಿದ್ಯಾರ್ಥಿಗಳ ಸಾವು, ನೋವಿಗೆ ಕಾರಣವಾಗಿತ್ತು. ಸದ್ಯ ಬೆಂಗರೆಯಲ್ಲಿ ಪ್ರೌಢ ಶಾಲೆಯವರೆಗೆ ಮಾತ್ರ ಶಿಕ್ಷಣ ದೊರೆಯುತ್ತಿದೆ. ಆದ್ದರಿಂದ ಪಿಯು ಕಾಲೇಜು ಸ್ಥಾಪನೆ ಮಾಡಿ, ಬೆಂಗರೆಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಎಸ್ ಐ ಒ ಒತ್ತಾಯಿಸಿದೆ.

ಇದೇ ವೇಳೆ ಬೆಂಗರೆಯಲ್ಲಿರುವ ಸರಕಾರಿ ಹೈಸ್ಕೂಲಿನಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ಈ ಹಿಂದೆ ಅನುದಾನ ಮಂಜೂ ರಾಗಿದ್ದರೂ ಈ ವರೆಗೆ ನಿರ್ಮಾಣವಾಗಿಲ್ಲ. ಈ ಹಿನ್ನೆಲೆಯಲ್ಲಿ ಅದರ ನಿರ್ಮಾಣ ಕಾಮಗಾರಿ ನಡೆಯಬೇಕು ಎಂದು ಎಸ್ ಐ ಒ ಬೆಂಗರೆ ಶಾಖೆಯು ಮನವಿಯಲ್ಲಿ ತಿಳಿಸಿದೆ.

ಮನವಿಯನ್ನು ಸ್ವೀಕರಿಸಿದ ಶಾಸಕ ಲೋಬೊ, ಈ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದರು.  ನಿಯೋಗದಲ್ಲಿ ಎಸ್ ಐ ಒ ದ.ಕ. ಜಿಲ್ಲಾಧ್ಯಕ್ಷ ತಲ್ಹಾ ಇಸ್ಮಾಯೀಲ್, ಅಝೀಝ್ ಬೆಂಗ್ರೆ, ಸೈಫ್ ಬೆಂಗ್ರೆ, ರಾಝಿಕ್ ಹಾಗೂ ರಿಹಾಮ್ ಬೆಂಗರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News