ಬಲೆಗೆ ಸಿಲುಕಿ ಸತ್ತಂತ್ತಿದ್ದ ನಾಗರಹಾವು ಚೇತರಿಕೆ !

Update: 2017-12-11 18:44 GMT

ಉಡುಪಿ, ಡಿ.11: ಬಲೆಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡು ಉಸಿರಾಡಲಾಗದೆ ಸತ್ತು ಹೋದಂತೆ ಕಂಡು ಬಂದಿದ್ದ ಹೆಣ್ಣು ನಾಗರಹಾವೊಂದು ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್ ಅವರ ಆರೈಕೆಯಿಂದ ವಿಸ್ಮಯಕಾರಿ ಚೇತರಿಸಿಕೊಂಡ ವಿದ್ಯಾಮಾನ ನಡೆದಿದೆ.

ಮಣಿಪಾಲದ ಸರಳಬೆಟ್ಟಿನ ಮನೆಯೊಂದರ ಅಂಗಳದಲ್ಲಿ ಕೊಬ್ಬರಿ ರಕ್ಷಣೆ ಗೆಂದು ಹಾಕಿದ್ದ ಬಲೆಗೆ ಡಿ.9ರಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಹೆಣ್ಣು ನಾಗರಹಾವೊಂದು ಆಕಸ್ಮಿಕವಾಗಿ ಸಿಲುಕಿಕೊಂಡಿತು. ಇದನ್ನು ನೋಡಿದ ಮನೆಮಂದಿ ಕೂಡಲೇ ಉರಗ ತಜ್ಞ ಗುರುರಾಜ್ ಸನಿಲ್ ಅವರಿಗೆ ಮೊಬೈಲ್ ಕರೆ ಮಾಡಿ ತಿಳಿಸಿದರು. ಸಂಜೆ 4.30ರ ಸುಮಾರಿಗೆ ಸ್ಥಳಕ್ಕೆ ಧಾವಿಸಿದ ಸನಿಲ್ ಬಲೆಯಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹಾವಿನ ರಕ್ಷಣೆಗೆ ಮುಂದಾದರು.

ಹಾವು ಬಲೆಯಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿದ್ದು, ಇಡೀ ಬಲೆ ಅದನ್ನು ಸುತ್ತಿಕೊಂಡಿರುವುದು ಕಂಡುಬಂತು. ಇದರಿಂದ ಹಾವು ಉಸಿರು ಗಟ್ಟಿ ನಿಸ್ತೇಜವಾಗಿ ಮರಗಟ್ಟಿ ಹೋಗಿತ್ತು. ಹಾವನ್ನು ಪರೀಕ್ಷಿಸಿದ ಸನಿಲ್ ಅದರ ಹೃದಯ ಅತೀ ಕ್ಷೀಣವಾಗಿ ಬಡಿದುಕೊಳ್ಳುತ್ತಿರುವುದನ್ನು ಗಮನಿಸಿದರು.

ಕೂಡಲೇ ಹಾವವನ್ನು ಬಲೆಯಿಂದ ಬಿಡಿಸಿದ ಅವರು, ಸತ್ತಂತೆ ಬಿದ್ದು ಕೊಂಡಿದ್ದ ಹಾವಿನ ಇಡೀ ದೇಹಕ್ಕೆ ನೀರು ಸುರಿದ ನಂತರ ಮರುಜೀವ ಪಡೆದಂತೆ ಅಲುಗಾಡುತ್ತ ಬಾಯಿಗಿಟ್ಟಿದ್ದ ಬಾಟಲಿಯನ್ನು ತಟ್ಟನೆ ಕಚ್ಚಿ ಹಿಡಿಯಿತು. ಬಳಿಕ ಸಂಪೂರ್ಣ ಚೇತರಿಸಿಕೊಂಡ ಹಾವನ್ನು ಸನಿಲ್ ಅಲ್ಲೇ  ಸಮೀಪದ ಹಾಡಿ ಯೊಳಗೆ ಬಿಟ್ಟರು.

ವಿಡೀಯೊ ಕೃಪೆ: ಗುರುರಾಜ್ ಸನಿಲ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News