ಜಲೀಲ್ ಕರೋಪಾಡಿ ಕೊಲೆ ಆರೋಪಿಯನ್ನು ಪಕ್ಷದೊಳಗಿಟ್ಟು ಸಾಮರಸ್ಯ ನಡಿಗೆ ಸಾಧ್ಯವೇ?: ಕರೋಪಾಡಿ ಗ್ರಾಮಸ್ಥರ ಪ್ರಶ್ನೆ

Update: 2017-12-11 14:33 GMT

ಮಂಗಳೂರು, ಡಿ.11: ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಡಿ.12ರಂದು ಹಮ್ಮಿಕೊಂಡಿರುವ ‘ಸಾಮರಸ್ಯದ ನಡಿಗೆ’ ಬಗ್ಗೆ ಪಕ್ಷದೊಳಗೇ ಅಪಸ್ವರ ಎದ್ದಿದೆ. ಹಿರಿಯ ಸಚಿವರಾಗಿ , ಜಿಲ್ಲೆಯ ಉಸ್ತುವಾರಿ ಇದ್ದೂ ಜಿಲ್ಲೆಯಲ್ಲಿ ಕೋಮುವಾದಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ ಎಂಬ ವ್ಯಾಪಕ ಅಸಮಾಧಾನ ಜನರಲ್ಲಿದೆ. ಜೊತೆಗೆ ಪಕ್ಷದ ಜನಪ್ರಿಯ ಯುವ ನಾಯಕ, ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಎ.ಅಬ್ದುಲ್ ಜಲೀಲ್ ಕರೋಪಾಡಿ ಹತ್ಯೆಗೆ ಸಚಿವರು ನ್ಯಾಯ ಒದಗಿಸಿಲ್ಲ ಎಂಬ ಆಕ್ರೋಶ ಬಂಟ್ವಾಳದ ಜನರಲ್ಲಿದೆ. ಅದನ್ನು ಕಡೆಗಣಿಸಿ ಸಾಮರಸ್ಯ ಪಾದಯಾತ್ರೆ ಮಾಡಿದರೆ ಅದಕ್ಕೆ ಸೂಕ್ತ ಸ್ಪಂದನೆ ಸಿಗುವುದು ಸಂಶಯ ಎಂದು ಪಕ್ಷದ ಸ್ಥಳೀಯ ನಾಯಕರು, ಕಾರ್ಯಕರ್ತರು ಅಭಿಪ್ರಾಯಿಸುತ್ತಿದ್ದಾರೆ. 

2017ರ ಎಪ್ರಿಲ್ 20ರಂದು ಹಾಡಹಗಲೇ ಜಲೀಲ್ ಕರೋಪಾಡಿಯವರನ್ನು ಗ್ರಾಪಂ ಕಟ್ಟಡದೊಳಗೆ ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿಗಳಾದ ಕರೋಪಾಡಿ ಗ್ರಾಪಂನ ಕಾಂಗ್ರೆಸ್ ಸದಸ್ಯ ದಿನೇಶ್ ಶೆಟ್ಟಿ ಹಾಗು ಆತನ ಸಹಚರರಾದ ವಿನೋದ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿಯನ್ನು ಪೊಲೀಸರು ಈವರೆಗೆ ಬಂಧಿಸಿಲ್ಲ. ತಮ್ಮ ಕ್ಷೇತ್ರದಲ್ಲೇ ಜನಪ್ರಿಯ ಯುವ ನಾಯಕನೊಬ್ಬನ ಬರ್ಬರ ಕೊಲೆ ಹಾಗು ಅದನ್ನು ಪೊಲೀಸರು ನಿರ್ವಹಿಸಿರುವ ರೀತಿಯ ಬಗ್ಗೆ ಮೌನವಾಗಿರುವ ಉಸ್ತುವಾರಿ ಸಚಿವರು ‘ಸಾಮರಸ್ಯದ ನಡಿಗೆ’ಗೆ ಮುಂದಾಗಿರುವುದು ಹಾಸ್ಯಾಸ್ಪದ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು ದೂರಿದ್ದಾರೆ.

ಜಲೀಲ್ ಕೊಲೆ ನಡೆದು ತಿಂಗಳವರೆಗೆ ಆ ಮೂವರು ಆರೋಪಿಗಳು ಊರಿನಲ್ಲೇ ರಾಜಾರೋಷವಾಗಿ ತಿರುಗಾಡುತ್ತಿದ್ದರೂ ಪೊಲೀಸರು ಅವರನ್ನು ಬಂಧಿಸಿಲ್ಲ. 2017ರ ಮೇ 26ರಂದು ಕಲ್ಲಡ್ಕದಲ್ಲಿ ಕೋಮು ಗಲಭೆ ಆರಂಭಗೊಳ್ಳುವ ಮೂಲಕ ಜಲೀಲ್ ಕರೋಪಾಡಿ ಕೊಲೆ ಪ್ರಕರಣ ಜನರ ಮನಸ್ಸಿನಿಂದ ಮರೆಯಾಗತೊಡಗಿತ್ತು. ಪೊಲೀಸರು ನಿಗದಿತ ಸಮಯಕ್ಕೆ ಚಾರ್ಜ್ ಶೀಟ್ ಸಲ್ಲಿಸದ ಕಾರಣ ಕಳೆದ ತಿಂಗಳು ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

"ಕೊಲೆ, ಹಿಂಸೆಯಲ್ಲಿ ಹೆಸರಿರುವ ಸಂಘಟನೆಗಳನ್ನು ಪಾದಯಾತ್ರೆಗೆ ಸೇರಿಸುತ್ತಿಲ್ಲ. ಇದು ಜಾತ್ಯತೀತರು ನಡೆಸುವ ಪಾದಯಾತ್ರೆ" ಎಂದು ಸಚಿವರು ಹೇಳಿದ್ದಾರೆ. ಆದರೆ ಜಲೀಲ್ ಕೊಲೆಯಲ್ಲಿ ಕರೋಪಾಡಿ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಸದಸ್ಯನೊಬ್ಬ ಆರೋಪಿಯಾಗಿದ್ದಾನೆ. ಅದರ ಬಗ್ಗೆ ಸಚಿವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಈ  ದ್ವಂದ್ವ ನಿಲುವು ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಲಿದೆ. ನಮಗೆ ಜನರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. 

ಇಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಆಡಳಿತ ಪಕ್ಷದ ಪ್ರತಿನಿಧಿಯ ಜೀವಕ್ಕೆ ಬೆಲೆ ಇಲ್ಲವಾಗಿದೆ ಎಂದು ಜಲೀಲ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಲೆಯಾಗಿ ಆರು ತಿಂಗಳ ಕಾಲ ಚಾರ್ಜ್ ಶೀಟ್ ಸಲ್ಲಿಸಲು ಸಾಧ್ಯವಾಗದ ಪೊಲೀಸರಿಗೆ ಆರೋಪಿಗಳಿಗೆ ಜಾಮೀನು ಲಭಿಸಿದ ಎರಡನೇ ದಿನದಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಸಾಧ್ಯವಾಗಿದೆ. ಸರಕಾರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯದಿಂದ ಆರೋಪಿಗಳು ಸುಲಭವಾಗಿ ಜಾಮೀನು ಪಡೆದು ಹೊರ ಬಂದಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇದು ರಮಾನಾಥ ರೈ ಹಾಗು ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. 

ಇದಕ್ಕೆ ಉತ್ತರ ನೀಡಲು ಸಾಧ್ಯವಾಗದ ಸಚಿವರು ‘ಸಾಮರಸ್ಯದ ನಡಿಗೆ’ ಎಂಬ ಬೀದಿ ನಾಟಕಕ್ಕೆ ಇಳಿದಿದ್ದಾರೆ ಎಂದು ಕರೋಪಾಡಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಲೀಲ್ ಕರೋಪಾಡಿಯನ್ನು ಸಂಘಪರಿವಾರದವರು ಕೊಂದಿದ್ದಾರೆ ಎಂದು ಸಭೆ ಸಮಾರಂಭಗಳಲ್ಲಿ ರಮಾನಾಥ ರೈ ಹೇಳುತ್ತಿದ್ದಾರೆ. ಎಲ್ಲ ಜಾತಿ ಧರ್ಮದವರೊಂದಿಗೆ ಅನ್ಯೋನ್ಯತೆಯಿಂದ ಇದ್ದ ಜಲೀಲ್ ಕರೋಪಾಡಿಯನ್ನು ಸಂಘಪರಿವಾರದವರು ಯಾಕೆ ಕೊಂದರು ಎಂಬುದನ್ನು ಸಚಿವರು ಸ್ಪಷ್ಟಪಡಿಸಬೇಕು. ಜಲೀಲ್ ಕೊಲೆಗೆ ಸಂಬಂಧಿಸಿ ಗುಪ್ತಚರ ಇಲಾಖೆ (ಐಬಿ) ರಾಜ್ಯ ಸರಕಾರಕ್ಕೆ ನೀಡಿರುವ ವರದಿಯಲ್ಲಿ ಕೊಲೆಗೆ ನೀಡಿರುವ ಕಾರಣ ಏನು ಎಂಬುದನ್ನಾದರೂ ಅವರು ಬಹಿರಂಗ ಪಡಿಸಬೇಕು ಎಂದು ಸ್ಥಳೀಯ  ಕಾಂಗ್ರೆಸ್ ಮುಖಂಡರೊಬ್ಬರು ಆಗ್ರಹಿಸಿದ್ದಾರೆ.

‘‘ಜಲೀಲ್ ಕೊಲೆಯಲ್ಲಿ ವಿಕ್ಕಿ ಶೆಟ್ಟಿ, ದಿನೇಶ್ ಶೆಟ್ಟಿ, ವಿನೋದ್ ಶೆಟ್ಟಿ, ಪ್ರದೀಪ್ ಶೆಟ್ಟಿಯ ಪಾತ್ರ ಇದೆ’’ ಎಂದು ಅಂದಿನ ಐಜಿಪಿ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಜಲೀಲ್ ಕೊಲೆ ಆರೋಪಿ ಕರೋಪಾಡಿ ಗ್ರಾಪಂ ಸದಸ್ಯನನ್ನು ಇನ್ನೂ ಪಕ್ಷದಿಂದ ಉಚ್ಛಾಟಿಸಿಲ್ಲ. ಜಲೀಲ್ ಕೊಲೆ ಆರೋಪಿಯನ್ನು ಪಕ್ಷದಲ್ಲಿಟ್ಟುಕೊಂಡು ನಡೆಸುವ ಈ ಯಾತ್ರೆ  ಅಲ್ಪಸಂಖ್ಯಾತ ಕಣ್ಣಿಗೆ ಮಣ್ಣೆರೆಚುವ ತಂತ್ರವಾಗಿದೆ ಎಂಬ  ಮಾತು ಕಾಂಗ್ರೆಸ್ ಪಕ್ಷದೊಳಗಿನಿಂದ  ಕೇಳಿಬರುತ್ತಿದೆ. ಜಲೀಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನವಾಗದಿದ್ದರೂ, ಆರೋಪಿಗಳಿಗೆ ಜಾಮೀನು ಸಿಗುವವರೆಗೆ ಚಾರ್ಜ್ ಶೀಟ್ ಹಾಕದಿದ್ದರೂ ಜಿಲ್ಲೆಯ ಇಬ್ಬರು ಸಚಿವರ ಸಹಿತ ಪಕ್ಷದಲ್ಲಿರುವ ಅಲ್ಪಸಂಖ್ಯಾತ ನಾಯಕರು ಮೌನವಾಗಿರುವುದು ಖೇದರ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ದೂರಿದ್ದಾರೆ.

ಅಶ್ರಫ್ ಕಲಾಯಿ ಮತ್ತು ಶರತ್ ಮಡಿವಾಳ ಹಂತಕರ ಬಗ್ಗೆ ಮಾತನಾಡುವ ರಮಾನಾಥ ರೈ, ಜಲೀಲ್ ಕರೋಪಾಡಿ ಕೊಲೆಯ ಬಗ್ಗೆ ಮೌನವಹಿಸಿದ್ದಾರೆ. ಆರಂಭದಲ್ಲೇ ಪ್ರಕರಣ ದಾರಿ ತಪ್ಪುತ್ತಿರುವ ಬಗ್ಗೆ ಜಲೀಲ್ ಕರೋಪಾಡಿಯ ಕುಟುಂಬ ಆತಂಕ ವ್ಯಕ್ತಪಡಿಸಿತ್ತು. ತನಿಖೆಗೆ ಸಿಐಡಿಗೆ ವಹಿಸಬೇಕೆಂದೂ ಆಗ್ರಹಿಸಿತ್ತು. ತಮ್ಮದೇ ಸರಕಾರವಿದ್ದರೂ, ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರು ಇದ್ದರೂ ಪ್ರಕರಣವನ್ನು ಸಿಐಡಿಗೆ ವಹಿಸಲು ಆರು ತಿಂಗಳುಗಳೇ ಬೇಕಾಯಿತು. ಎಲ್ಲಾ ಸಾಕ್ಷಗಳ ನಾಶದ ಬಳಿಕ ಸಿಐಡಿಗೆ ನೀಡಲಾಗಿದೆ ಎಂದು ಜಲೀಲ್ ಕರೋಪಾಡಿಯವರ ಅಭಿಮಾನಿಗಳು ಆರೋಪಿಸುತ್ತಾರೆ. 

2014ರ ಸಾಮರಸ್ಯದ ಸಮಾವೇಶ: ಮುಸ್ಲಿಮ್ ಯುವಕರೇ ಬಲಿಪಶು 

2014ರಲ್ಲಿ ಕಲ್ಲಡ್ಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಮ್ಮಿಕೊಂಡ ಸಾಮರಸ್ಯದ ಸಮಾವೇಶಕ್ಕೆ ಸಂಘಪರಿವಾರದ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಪ್ರತಿ ದಾಳಿಯ ಆರೋಪದಲ್ಲಿ 24 ಮಂದಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ 307ನಂತಹ ಕಠಿಣ ಕಾಲಂನಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ 22 ಮಂದಿ ಮುಸ್ಲಿಮ್ ಯುವಕರಾಗಿದ್ದು, ವಿದೇಶದಲ್ಲಿ ಇದ್ದವರೂ ಸೇರಿದ್ದಾರೆ ಎಂದು ಕೇಸ್ ದಾಖಲಾಗಿರುವ ಕಲ್ಲಡ್ಕದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ದೂರಿದ್ದಾರೆ.

ಈ ಕೇಸನ್ನು ವಾಪಸ್ ಪಡೆಯುವಂತೆ ರಮಾನಾಥ ರೈ ಅವರಲ್ಲಿ ಹತ್ತು ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಇಂದಿಗೂ ನಾವು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದೇವೆ. ಆಶ್ಚರ್ಯವೆಂದರೆ ಎಫ್‌ಐಆರ್‌ನಲ್ಲಿ 24 ಮಂದಿಯ ಜೊತೆ ಇತರರು ಎಂದಿದ್ದ ಪಟ್ಟಿಗೆ ಬಂಟ್ವಾಳ ಪುರಸಭೆಯ ನಾಮ ನಿರ್ದೇಶಿತ ಕಾಂಗ್ರೆಸ್ ಸದಸ್ಯನೊಬ್ಬನನ್ನು ಮೂರು ವರ್ಷದ ಬಳಿಕ ಅಂದರೆ ಕಳೆದ ಎರಡು ತಿಂಗಳ ಹಿಂದೆ ಪೊಲೀಸರು ಫಿಕ್ಸ್ ಮಾಡಿದ್ದಾರೆ. ಈ ಬಗ್ಗೆ ನಾವು ಸಚಿವರ ಗಮನ ಸೆಳೆದಾಗ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧವೇ ಪೊಲೀಸರು ಸುಳ್ಳು ಕೇಸ್ ದಾಖಲಿಸುತ್ತಿರುವಾಗ ಅಸಹಾಯಕತೆ ವ್ಯಕ್ತಪಡಿಸುವ ಸಚಿವ ರಮಾನಾಥ ರೈ ‘ಸಾಮರಸ್ಯದ ನಡಿಗೆ’ ಹಮ್ಮಿಕೊಂಡಿರುವುದಕ್ಕೆ ಅರ್ಥವೇ ಇಲ್ಲ ಎಂದು ಅವರು ಹೇಳಿದ್ದಾರೆ. 

ಕಲ್ಲಡ್ಕದ ಮೂಲಕ ‘ಸಾಮರಸ್ಯದ ನಡಿಗೆ’ ಬೇಡ !

2014ರಲ್ಲಿ ಬಿಗಿ ಭದ್ರತೆಯಲ್ಲಿ ಕಲ್ಲಡ್ಕದಲ್ಲಿ ನಡೆದ ‘ಸಾಮರಸ್ಯದ ಸಮಾವೇಶ’ಕ್ಕೆ ಸಂಘಪರಿವಾರದವರು ಕಲ್ಲು ತೂರಾಟ ನಡೆಸಿದ್ದಾರೆ. ಡಿಸೆಂಬರ್ 12ರಂದು ನಡೆಯುವ ಸಾಮರಸ್ಯದ ರ್ಯಾಲಿಗೆ ಕಲ್ಲಡ್ಕದಲ್ಲಿ ಸಂಘಪರಿವಾರದವರು ಕಲ್ಲು ಬಿಸಾಡುವ ಅಪಾಯವಿದೆ. ಯಾರು ದಾಂಧಲೆ ನಡೆಸಿದರೂ ಕೇಸ್ ದಾಖಲಾಗುವುದು ಇಲ್ಲಿನ ಅಮಾಯಕ ಮುಸ್ಲಿಮ್ ಯುವಕ ಮೇಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಫರಂಗಿಪೇಟೆಯಿಂದ ಮಾಣಿವರೆಗೆ ನಡೆಯುವ ‘ಸಾಮರಸ್ಯದ ನಡಿಗೆ’ ಕಲ್ಲಡ್ಕದ ಮೂಲಕ ಹೋಗದೆ ಶಂಭೂರು- ದಾಸರಕೋಡಿಯಾಗಿ ಮಾಣಿಗೆ ಹೋಗುವಂತೆ ನಾವು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದೇವೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸಾಮರಸ್ಯ ನಡಿಗೆ ಅಲ್ಲ, 'ಚುನಾವಣಾ ನಡಿಗೆ': ಕೆ.ಅಶ್ರಫ್

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ನೇತೃತ್ವದಲ್ಲಿ ಬಂಟ್ವಾಳ ತಾಲೂಕಿನಲ್ಲಿ ಡಿ.12ರಂದು ನಡೆಯುವುದು ‘ಸಾಮರಸ್ಯ ನಡಿಗೆ’ ಅಲ್ಲ. ಅದೊಂದು ಚುನಾವಣಾ ನಡಿಗೆಯಷ್ಟೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ದ.ಕ. ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದ್ದರೂ ಕೂಡ ನ್ಯಾಯ ಒದಗಿಸಿಕೊಡದ ಉಸ್ತುವಾರಿ ಸಚಿವರು ಇದೀಗ ಸೋಲುವ ಭೀತಿಯಿಂದ ‘ಸಾಮರಸ್ಯ ನಡಿಗೆ’ಯ ಹೆಸರಿನಲ್ಲಿ ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ಎಡಪಕ್ಷಗಳನ್ನೂ ಕೂಡ ಹತ್ತಿರ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ  ರಾಜ್ಯ ಉಪಾಧ್ಯಕ್ಷ, ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗು ಮಾಜಿ ಮೇಯರ್ ಕೆ.ಅಶ್ರಫ್ ತಿಳಿಸಿದ್ದಾರೆ.

“ಆತ್ಮ ಸಾಕ್ಷಿ ಇರುವ ಯಾವೊಬ್ಬ ಮುಸ್ಲಿಂ ಕೂಡ ಈ ಯಾತ್ರೆಗೆ ಕೈ ಜೋಡಿಸಲಾರ. ಯಾಕೆಂದರೆ ಇದು ಪಕ್ಕಾ ರಾಜಕೀಯ ಗಿಮಿಕ್ ಅಷ್ಟೆ. ಜಿಲ್ಲೆಯ ಇಬ್ಬರು ಸಚಿವರಿಗೆ ಮುಸ್ಲಿಮರ ಮೇಲೆ ಗೌರವ, ಪ್ರೀತಿ ಇದ್ದಿದ್ದರೆ ಮುಸ್ಲಿಮರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದ್ದರು. ಆದರೆ, ಅದ್ಯಾವುದನ್ನೂ ಮಾಡದ ಇವರು ಇದೀಗ ‘ಚುನಾವಣಾ ನಡಿಗೆ’ ಹಮ್ಮಿಕೊಂಡಿರುವುದು ಖಂಡನೀಯ”.

“ನಾನು ಕಾಂಗ್ರೆಸ್ ಪಕ್ಷದೊಳಗಿದ್ದುಕೊಂಡು ಅನ್ಯಾಯ-ಅಕ್ರಮದ ವಿರುದ್ಧ ಧ್ವನಿ ಎತ್ತುತ್ತಾ ಬಂದಿದ್ದೇನೆ. ಮುಂದೆ ಯಾವುದೇ ಅನ್ಯಾಯ ಆಗದಂತೆ ನೋಡಿಕೊಳ್ಳುವೆವು ಎಂದು ಕಾಂಗ್ರೆಸ್ ನಾಯಕರು ಭರವಸೆ ನೀಡಿದ ಕಾರಣ ನಾನು ಮರಳಿ ಪಕ್ಷ ಸೇರಿದ್ದೇನೆ. ಈಗ ಪಕ್ಷದೊಳಗಿದ್ದುಕೊಂಡೇ ನಾಯಕರ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದ್ದೇನೆ. ನಾಳೆ ನನ್ನನ್ನು ಪಕ್ಷದಿಂದ ಉಚ್ಛಾಟಿಸಿದರೂ ಸರಿ, ಹೋರಾಟ ಕೈ ಬಿಡಲಾರೆ”.

“ಪವಿತ್ರ ಕುರ್‌ಆನ್‌ಗೆ ಪೊಲೀಸರು ಅಗೌರವ ತೋರಿದುದನ್ನು ಸಚಿವರು ನಿರ್ಲಕ್ಷಿಸಿರಬಹುದು. ಆದರೆ, ನಮಗೆ ನಿರ್ಲಕ್ಷಿಸಲು ಅಸಾಧ್ಯ. ಮುಸ್ಲಿಮರಿಗೆ ವಿರುದ್ಧ ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಡೆದ ಅನ್ಯಾಯದ ವಿರುದ್ಧ ಕ್ರಮ ಜರಗಿಸದ ಸಚಿವರ ನಿರ್ಲಕ್ಷ್ಯ, ಅಸಹಾಯಕತೆಯ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News