ಪೆರಂಪಳ್ಳಿಯಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು: ಬಾಲಕಿ ರಕ್ಷಣೆ

Update: 2017-12-11 14:47 GMT

ಉಡುಪಿ, ಡಿ.11: ಪೆರಂಪಳ್ಳಿಯಲ್ಲಿ ಸೋಮವಾರ ಬೆಳಗ್ಗೆ 11ಗಂಟೆಗೆ ನಡೆಯ ಬೇಕಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯ ವಿವಾಹವನ್ನು ಬೆಳಗ್ಗೆ 8ಗಂಟೆಗೆ ಅಧಿಕಾರಿಗಳ ತಂಡ ಮನೆಗೆ ತೆರಳಿ ವಿವಾಹ ತಡೆದ ಬಗ್ಗೆ ವರದಿಯಾಗಿದೆ.

ಪೆರಂಪಳ್ಳಿಯ ಅಪ್ರಾಪ್ತ ವಯಸ್ಸಿನ ಬಾಲಕಿಯ ಮದುವೆ ಇಂದು ಬೆಳಗ್ಗೆ 11 ಗಂಟೆಗೆ ಶ್ರೀಶ ಭಟ್ ಎಂಬವರ ಮನೆಯಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್, ತಹಶೀಲ್ದಾರ ಪ್ರದೀಪ್ ಕುರ್ಡೆಕರ್, ಪೊಲೀಸ್ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ, ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಹಾಗೂ ಸಿಬ್ಬಂದಿ ಜಿಲ್ಲಾಧಿಕಾರಿ ಆದೇಶದಂತೆ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಹಾಜರಿದ್ದ ಬಾಲಕಿಯ ತಾಯಿ, ಕುಟುಂಬಸ್ಥರು, ಸೋದರ ಮಾವ, ಅತ್ತೆಯೊಂದಿಗೆ ಅಧಿಕಾರಿಗಳು ಚರ್ಚಿಸಿ, ಹೆಣ್ಣು ಮಕ್ಕಳಿಗೆ 18 ವರ್ಷಕ್ಕೆ ಮೊದಲು ಮದುವೆ ಮಾಡಿದಲ್ಲಿ ಅದು ಬಾಲ್ಯ ವಿವಾಹ ಆಗುವುದಾಗಿ ತಿಳಿ ಹೇಳಲಾಯಿತು. ಬಾಲಕಿಯ ವಯಸ್ಸಿನ ಬಗ್ಗೆ ಆಧಾರ್‌ಕಾರ್ಡ್ ಪರಿಶೀಲಿಸಿ ಆಕೆಗೆ 16ವರ್ಷ 11 ತಿಂಗಳು (ಜನ್ಮ ದಿನಾಂಕ: 07.01.2001) ಎಂಬುದಾಗಿ ಖಚಿತಪಡಿಸಿಕೊಳ್ಳಲಾಯಿತು.

ಈ ಬಗ್ಗೆ ತಾಯಿ ಮತ್ತು ಮಗಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಮನವರಿಕೆ ಮಾಡಿಸಿ, ಮಗಳಿಗೆ 18 ವರ್ಷ ಪೂರ್ತಿಯಾಗದೆ ವಿವಾಹ ಮಾಡದಂತೆ ತಾಯಿಯಿಂದ ಮುಚ್ಚಳಿಕೆ ಬರೆಸಲಾಯಿತು.

ವಿವಾಹ ನಡೆಸಿಕೊಡಲು ಮುಂದಾಗಿದ್ದ ಪುರೋಹಿತರನ್ನು ಭೇಟಿ ಮಾಡಿದ ಅಧಿಕಾರಿಗಳು, ಮದುವೆಯ ಬಗ್ಗೆ ವಿಚಾರಿಸಿದರು. ‘ವಧುವಿನ ತಾಯಿ ಮದುವೆ ಮಾಡಿಸಲು ತಿಳಿಸಿದ್ದು, ವಯಸ್ಸಿನ ಬಗ್ಗೆ ಕೇಳಿದಾಗ ಆಕೆಗೆ ಮದುವೆಯ ವಯಸ್ಸಾಗಿದೆ. ಆ ಬಗ್ಗೆ ದಾಖಲೆ ಬೇಕಾದರೆ ನೀಡುತ್ತೇವೆ ಎಂದು ತಿಳಿಸಿದ ಕಾರಣ ನಾನು ಮದುವೆ ಮಾಡಿಸಲು ಒಪ್ಪಿಕೊಂಡಿದ್ದೇನೆ. ಈಗ ಆಕೆಗೆ 18 ವರ್ಷ ಪೂರ್ತಿಯಾಗದೆ ಇರುವುದು ತಿಳಿದಿದ್ದು, ಇದು ಕಾನೂನು ರೀತಿ ತಪ್ಪೆಂದು ಅರಿವು ಆಗಿದೆ. ಇನ್ನು ಮುಂದೆ ದಾಖಲೆಯನ್ನು ಪರಿಶೀಲಿಸಿ, ವಯಸ್ಸನ್ನು ಖಚಿತ ಪಡಿಸಿಕೊಂಡೇ ವಿವಾಹ ಮಾಡಿಸುವುದಾಗಿ ಅವರು ಲಿಖಿತವಾಗಿ ಮುಚ್ಚಳಿಕೆಯನ್ನು ಅಧಿಕಾರಿಗಳಿಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News