ಭ್ರಷ್ಟಾಚಾರ ಮುಚ್ಚಿಹಾಕಲು ಬಿಜೆಪಿ ಹುನ್ನಾರ: ಬಾಲಕೃಷ್ಣ ಶೆಟ್ಟಿ

Update: 2017-12-11 15:03 GMT

ಕುಂದಾಪುರ, ಡಿ.11: ಬಿಜೆಪಿ ಅಧಿಕಾರದಲ್ಲಿರುವ ಎಂಟು ರಾಜ್ಯಗಳಲ್ಲಿ ಬಿಜೆಪಿ ಮುಖಂಡರ ಭ್ರಷ್ಟಾಚಾರಗಳನ್ನು ತನಿಖೆ ಮಾಡುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿ ಜನರ ಗಮನ ಬೇರೆಡೆ ಸೆಳೆಯಲು ಹಿಂದು ಸಮಾಜೋತ್ಸವ ಸಂಘಟಿಸಿ ರಾಜಕೀಯ ಅಧಿಕಾರ ಗಟ್ಟಿಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಸಿಪಿಎಂ ಜಿಲ್ಲಾ ಕಾಯದರ್ರ್ಶಿ ಬಾಲಕೃಷ್ಣ ಶೆಟ್ಟಿ ಟೀಕಿಸಿದ್ದಾರೆ.

 ಕುಂದಾಪುರ ಕಾರ್ಮಿಕ ಭವನದಲ್ಲಿ ಕಾಂ.ಕೋಣಿ ಅನಂತ ಪೂಜಾರಿ ವೇದಿಕೆ ಯಲ್ಲಿ ರವಿವಾರ ಆಯೋಜಿಸಲಾದ ಸಿಪಿಎಂ ಪಕ್ಷದ ಕುಂದಾಪುರ ವಲಯ 2ನೇ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಧರ್ಮ ಸಂಸದ್, ಸಮಾಜೋತ್ಸವಗಳಲ್ಲಿ ಬಡವರ, ಶೋಷಿತರ ಬಗೆಗಿನ ಚರ್ಚೆಗಳಾಗುತ್ತಿಲ್ಲ. ಧರ್ಮ ಧರ್ಮಗಳ ನಡುವಿನ ಸಾಮರಸ್ಯ ಬೆಳೆಸುವ ಬದಲಾಗಿ ಅವುಗಳು ಪರಧರ್ಮಗಳ ಬಗ್ಗೆ ದ್ವೇಷ ಬೆಳೆಸುವ ರಾಜಕೀಯ ಲಾಭ ಪಡೆಯುವ ವೇದಿಕೆಗಳಾಗುತ್ತಿರುವುದು ದುರಾದೃಷ್ಟಕರ ಎಂದರು.

ಅಧಿಕಾರದಲ್ಲಿರುವ ಬಿಜೆಪಿಯ ಬಂಡವಾಳಶಾಹಿ ನೀತಿಗಳನ್ನು ಪ್ರಬಲವಾಗಿ ವಿರೋಧಿಸುವ ಸಿಪಿಎಂನ ನಿಲುವುಗಳು ಸಂಘಪರಿವಾರಕ್ಕೆ ಭಯ ಹುಟ್ಟಿಸಿದೆ. ರಾಜಕೀಯ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ದೆಹಲಿ, ಕರ್ನಾಟಕ, ಕೇರಳ, ತೆಲಂಗಾಣಗಳ ರಾಜ್ಯಗಳಲ್ಲಿ ಪಕ್ಷದ ಕಚೇರಿ, ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್ ಮಾತನಾಡಿ, ಸಿಪಿಎಂ ಜನರ ಪಕ್ಷವಾಗಿದೆ. ಜನತೆ ಎದುರಿಸುವ ಸಮಸ್ಯೆಗಳಿಗೆ ಎದುರಾಗಿ ಹೋರಾಟ ನಡೆಸಿ ಜನರ ಸಮಸ್ಯೆಗಳ ಪರಿಹರಿಸುವ ಸಿದ್ದಾಂತ ಕ್ರಾಂತಿಕಾರಿ ಕಮ್ಯುನಿಸ್ಟ್ ಪಕ್ಷದ್ದಾಗಿದೆ. ಪಕ್ಷ ಜನರ ಬಳಿಗೆ ಹೋಗುವುದು ಜನರಿಂದ ಕಲಿಯುವುದು ಪಕ್ಷದ ಕಾರ್ಯಕ್ರಮವಾಗಿರುವುದ ರಿಂದಲೇ ಇದಕ್ಕೆ ಜನರೇ ಹೈಕಮಾಂಡ್ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಸಿಪಿಎಂ ಮುಖಂಡ ದಾಸ ಭಂಡಾರಿ ವಹಿಸಿದ್ದರು. ವಿ. ನರಸಿಂಹ ಧ್ವಜಾರೋಹಣ ಮಾಡಿದರು. ಪ್ರತಿನಿಧಿ ಅಧಿವೇಶನದಲ್ಲಿ ವಲಯ ಕಾರ್ಯದರ್ಶಿ ಎಚ್.ನರಸಿಂಹ ವರದಿ ಮಂಡಿಸಿದರು. ನಿವೇಶನ ರಹಿತರ ಹೋರಾಟ, ಪುರಸಭೆ ಅಸಮರ್ಪಕ ಒಳ ಚರಂಡಿ ಯೋಜನೆ ವಿರುದ್ದ ಹೋರಾಟಗಳನ್ನು ತೀವ್ರಗೊಳಿಸುವ ನಿರ್ಣಯ ಮಂಡಿಸಲಾಯಿತು.

ಸಮ್ಮೇಳನವು ಎಚ್.ನರಸಿಂಹ ಅವರನ್ನು ಎರಡನೆ ಅವಧಿಗೆ ಕಾರ್ಯದರ್ಶಿ ಯಾಗಿ ಪುನರಾಯ್ಕೆಗೊಳಿಸಿತು. ಮಹಾಬಲ ವಡೇರಹೋಬಳಿ, ಬಲ್ಕೀಸ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುರೇಶ್ ಕಲ್ಲಾಗರ, ವಲಯ ಮುಖಂಡರಾದ ಕರಿಯ ದೇವಾಡಿಗ, ರಾಜೇಶ್ ವಡೇರಹೋಬಳಿ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News