ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿ ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿ

Update: 2017-12-11 15:09 GMT

ಉಡುಪಿ, ಡಿ.11: ಸ್ವಾತಂತ್ರಪೂರ್ವದಲ್ಲಿ ಉಡುಪಿ ತಾಲೂಕಿನ ಅದರಲ್ಲೂ ಮುಖ್ಯವಾಗಿ ಉಡುಪಿ ಸುತ್ತಮುತ್ತಲಿನ ರೈತಾಪಿ ಜನರಿಗೆ ಕೃಷಿಗೆ ಅಗತ್ಯವಾಗಿದ್ದ ರಾಸಾಯನಿಕ ಗೊಬ್ಬರ, ಬಿತ್ತನೆ ಬೀಜ, ಪಡಿತರ ಸಾಮಗ್ರಿಗಳು, ಕೃಷಿ ಉಪಕರಣಗಳ ವಿತರಣೆಗಾಗಿ ಸ್ಥಾಪನೆಗೊಂಡ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸಾಟಿ ಇದೀಗ ಶತಮಾನೋತ್ಸವ ಆಚರಣೆಯಲ್ಲಿ ಸಂಭ್ರಮದಲ್ಲಿದೆ ಎಂದು ಸೊಸಾಟಿಯ ಅಧ್ಯಕ್ಷ ಸಂಜೀವ ಕಾಂಚನ್ ಹಾಗೂ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಡಿ.14ರಂದು ಅಪರಾಹ್ನ 3:30ಕ್ಕೆ ಶತಮಾನೋತ್ಸವ ಸಂಭ್ರಮಾಚರಣೆ ಉದ್ಘಾ ಟನಾ ಕಾರ್ಯಕ್ರಮ ನಗರದ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ ಎಂದರು.

ಕಟಪಾಡಿ ಬೀಡು ಜಗನ್ನಾಥ ಬಲ್ಲಾಳರ ನೇತೃತ್ವದಲ್ಲಿ 1918ರಲ್ಲಿ ಸ್ಥಾಪನೆಗೊಂಡ ಸೊಸಾಟಿ, 1979ರಿಂದ ಎರಡು ವರ್ಷಗಳ ಕಾಲ ಸರಕಾರದ ಸುಪರ್ದಿಗೆ ಒಳಪಟ್ಟು, ಸಹಕಾರಿ ಇಲಾಖೆಯಿಂದ ನೇಮಕಗೊಂಡ ಆಡಳಿತಾ ಧಿಕಾರಿಗಳ ಮೂಲಕ ಆಡಳಿತ ನಡೆಸಿತು. 1981ರಲ್ಲಿ ಸರಕಾರ ಹೊಸ ಆಡಳಿತ ಮಂಡಳಿ ರಚನೆಗೆ ಅನುವು ಮಾಡಿಕೊಟ್ಟಿತು ಎಂದು ಜಯಕರ ಶೆಟ್ಟಿ ಇಂದ್ರಾಳಿ ವಿವರಿಸಿದರು.

1980ರಲ್ಲಿ ಕೇವಲ 306 ಸದಸ್ಯರಿದ್ದ ಸೊಸಾಟಿಯಲ್ಲಿ ಇಂದು 28,000 ಸದಸ್ಯರಿದ್ದಾರೆ. ಇಂದು ಸರಿ ಸುಮಾರು 4ಕೋಟಿ ರೂ. ಪಾಲು ಬಂಡವಾಳ,  244 ಕೋಟಿ ರೂ. ಠೇವಣಿ ಸಂಗ್ರಹ, ದಿನವೊಂದಕ್ಕೆ ಸರಾಸರಿ 3.25 ಕೋಟಿ ರೂ. ಮಿಕ್ಕಿ ವಾರ್ಷಿಕ ವಹಿವಾಟು ಮಾಡುತ್ತಿದೆ. 2016-17ನೇ ಸಾಲಿನಲ್ಲಿ ನಾಲ್ಕು ಕೋಟಿ ರೂ.ಗೂ ಅಧಿಕ ಲಾಭ ಗಳಿಸಿದ್ದು, ಸ್ವತಂತ್ರ ಹಾಗೂ ಸ್ವಾವಲಂಬಿ ಘಟಕವಾಗಿ ಪರಿಗಣಿಸಲ್ಪಟ್ಟಿದೆ. ಸಂಸ್ಥೆ ಇದುವರೆಗೆ 11 ಜಿಲ್ಲಾ ಮಟ್ಟದ, 4 ರಾಜ್ಯಮಟ್ಟದ ಹಾಗೂ ಸತತ 2 ಬಾರಿ ಕೇಂದ್ರ ಸರಕಾರದ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ ಎಂದವರು ನುಡಿದರು.

 ಬಡಗುಬೆಟ್ಟು ಸೊಸಾಟಿ ಕೇವಲ ಬ್ಯಾಂಕಿಂಗ್ ವ್ಯವಹಾರ ನಡೆಸದೇ, ಗಳಿಸಿದ ಲಾಭದಲ್ಲಿ ನಿರಂತರವಾದ ಸಾಮಾಜಿಕ ಕಳಕಳಿಯ ಅನೇಕ ಕಾರ್ಯ ಕ್ರಮಗಳನ್ನು ನಡೆಸುತ್ತಾ ಜನಮೆಚ್ಚುಗೆ ಗಳಿಸಿದೆ. ಸಂಸ್ಥೆಯು ತಾಲೂಕಿನಲ್ಲಿ ಈಗಾಗಲೇ 9 ಶಾಖೆಗಳನ್ನು ಹೊಂದಿದ್ದು, ಇವುಗಳಲ್ಲಿ 8 ಶಾಖೆಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. ಶೀಘ್ರವೇ ಕುಕ್ಕಿಕಟ್ಟೆ ಹಾಗೂ ಮಣಿಪಾಲಗಳಲ್ಲಿ ಎರಡು ಹೊಸ ಶಾಖೆಗಳನ್ನು ತೆರೆಯಲಾಗುವುದು ಎಂದು ದರು.

ಶತಮಾನೋತ್ಸವದ ಸಂಭ್ರಮದಲ್ಲಿ ಮುಂದಿನ ಒಂದು ವರ್ಷ ನೂರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಇದೇ ಸಂದರ್ಭದಲ್ಲಿ ಸದಸ್ಯರಿಗೆ ಆರೋಗ್ಯ ಕಾರ್ಡ್ ವಿತರಣೆ, ಅಂಚೆಚೀಟಿ ಬಿಡುಗಡೆ, ಬ್ಯಾಂಕಿಂಗ್ ವ್ಯವಹಾರಕ್ಕೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಕೆ, ವಿದ್ಯಾರ್ಥಿಗಳಿಗೆ ಶೂನ್ಯ ಬ್ಯಾಲೆನ್ಸ್‌ನಲ್ಲಿ ಉಳಿತಾಯ ಖಾತೆ, ಜನಜಾಗೃತಿ ಶಿಬಿರ, ಪರಿಸರ ಜಾಗೃತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ರಾಜ್ಯ ಸಹಕಾರ ಸಚಿವ ರಮೇಶ್ ಜಾರಕಿಹೊಳಿ ಅವರು ಶತಮಾನೋತ್ಸವ ಸಂಭ್ರಮವನ್ನು ಡಿ.14ರ  ಸಂಜೆ 4:30ಕ್ಕೆ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸುವರು. ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಉಡುಪಿ ಶೋಕಮಾತ ಇಗರ್ಜಿಯ ಧರ್ಮಗುರುಗಳಾದ ವಂ.ವಲೇರಿಯನ್ ಮೆಂಡೋನ್ಸ ಹಾಗೂ ಉಡುಪಿ ಅಂಜುಮಾನ್ ಮಸೀದಿಯ ಧರ್ಮಗುರು ವೌಲಾನಾ ಮಹಮ್ಮದ್ ಇನಾಯತುಲ್ಲಾ ರಿಝ್ವಿ ಆಶೀರ್ವಚನ ನೀಡಲಿದ್ದಾರೆ.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಾಜಿ ಸಚಿವ, ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ, ಬೆಂಗಳೂರು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಮುಖ್ಯ ನಿರ್ದೇಶಕ ಡಾ.ಕೆ.ಟಿ.ಚೆನ್ನೇಶಪ್ಪ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಇದರ ಅಂಗವಾಗಿ 3:30ರಿಂದ ಯಕ್ಷ-ನಾಟ್ಯ ವೈಭವ ಹಾಗೂ ಸಂಜೆ 5:30ಕ್ಕೆ ಯಕ್ಷ ಗಾನ ವೈಭವ ನಡೆಯಲಿದ್ದು, ಇದರಲ್ಲಿ ಪಟ್ಲ ಸತೀಶ್ ಶೆಟ್ಟಿ, ಜನ್ಸಾಲೆ ರಾಘವೇಂದ್ರ ಆಚಾರ್ಯ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಎಲ್. ಉಮಾನಾಥ್, ಶತಮಾನೋತ್ಸವ ಸಮಿತಿಯ ಸಂಚಾಲಕ ಪುರುಷೋತ್ತಮ ಪಿ. ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News