ಕೋಟ್ಪಾಉನ್ನತ ಅನುಷ್ಠಾನ ಜಿಲ್ಲೆಯಾಗಿ ಉಡುಪಿ ಘೋಷಣೆ

Update: 2017-12-11 15:12 GMT

ಉಡುಪಿ, ನ.11: ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಸಾರ್ವ ಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ತಂಬಾಕು ನಿಯಂತ್ರಣ ಕುರಿತು ಗುಲಾಬಿ ಆಂದೋಲನ ಮತ್ತು ಕೋಟ್ಪಾ 2003 ಉನ್ನತ ಅನುಷ್ಠಾನ ಜಿಲ್ಲೆ ಘೋಷಣೆ ಕಾರ್ಯಕ್ರಮವನ್ನು ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲೆಯನ್ನು ಕೋಟ್ಪಾ-2003 ಉನ್ನತ ಅನುಷ್ಠಾನ ಜಿಲ್ಲೆಯಾಗಿ ಜಿಲ್ಲಾಧಿಕಾರಿಗಳು ಘೋಷಿಸಿದ್ದು, ಅದರ ಘೋಷಣಾ ಪತ್ರವನ್ನು ಅಪರ ಜಿಲ್ಲಾಧಿಕಾರಿ ಅನುರಾಧ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಎಂ.ಪಾಟೀಲ್ ಅವರಿಗೆ ಹಸ್ತಾಂತರಿಸಿದರು. ಈ ಸಂಬಂಧ ಅನುಷ್ಠಾನಕ್ಕೆ ಶ್ರಮಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್ಪಿ ಡಾ.ಸಂಜೀವ ಎಂ.ಪಾಟೀಲ್ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆಯಡಿ ಈ ವರ್ಷ ನವೆಂಬರ್ ತಿಂಗಳವರೆಗೆ ಒಟ್ಟು 1700 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದು ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳಾಗಿವೆ. ವಿದ್ಯಾ ಸಂಸ್ಥೆಗಳ 100ಮೀಟರ್ ವ್ಯಾಪ್ತಿಯೊಳಗೆ ಮತ್ತು 18ವರ್ಷದೊಳಗಿನ ಮಕ್ಕಳಿಗೆ ತಂಬಾಕು ಮಾರಾಟ ಮಾಡಿದರೆ ಹಾಗೂ ಬಸ್‌ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡುವುದು ಕಂಡುಬಂದರೆ ಕೂಡಲೇ 100ಕ್ಕೆ ಕರೆ ಮಾಡಿ ತಿಳಿಸಿ. ಈ ರೀತಿಯಾದರೆ ಮುಂದಿನ ಮೂರು ವರ್ಷಗಳಲ್ಲಿ ಇಡೀ ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆಯನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡಬಹುದಾಗಿದೆ ಎಂದರು.

ಭಾರತದಲ್ಲಿ ಅತಿ ಹೆಚ್ಚು ಜನರು ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಪ್ರತಿ ದಿನ 2,500 ಮಂದಿ ರೋಗಿಗಳು ಸಾಯುತ್ತಿದ್ದಾರೆ. 1980ರಲ್ಲಿ ಶೇ.33 ರಷ್ಟಿದ್ದ ತಂಬಾಕು ಸೇವನೆ ಪ್ರಮಾಣ 2002ಕ್ಕೆ ಶೇ.23ಕ್ಕೆ ಇಳಿದಿದೆ. ತಂಬಾಕು ಸೇವನೆ ಮಾಡುವ ಪುರುಷರ ಸಂಖ್ಯೆ ಇಳಿಮುಖವಾದರೆ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ವಹಿಸಿದ್ದರು. ನಗರಸಭೆ ಸದಸ್ಯ ಯಶಪಾಲ್ ಸುವರ್ಣ, ರಾಜ್ಯ ತಂಬಾಕು ನಿಯಂತ್ರಣಾ ಘಟಕದ ಉಪನಿರ್ದೇಶಕ ಡಾ.ಎಂ.ಸೆಲ್ವರಾಜನ್, ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ ಕಾರಿಂಜ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್, ಕಾಲೇಜಿನ ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರಕಾಶ್ ಅಂದ್ರಾದೆ, ಮುಖ್ಯೋಪಾ ಧ್ಯಾಯ ವಿಶ್ವನಾಥ್ ಬಾಯರಿ ಉಪಸ್ಥಿತರಿದ್ದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ವಾಸುದೇವ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ವಿದ್ಯಾರ್ಥಿನಿ ಕೃತಿ ವಂದಿಸಿದರು. ರಾಮಕೃಷ್ಣ ನಾಯಕ್ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News