ಫರಂಗಿಪೇಟೆಯಲ್ಲಿ ‘ಸಾಮರಸ್ಯ ನಡಿಗೆ’ಗೆ ಚಾಲನೆ

Update: 2017-12-12 11:08 GMT

ಬಂಟ್ವಾಳ, ಡಿ.12: ಜಾತ್ಯತೀತ ಪಕ್ಷ, ಸಂಘಟನೆಗಳ ಸಹಭಾಗಿತ್ವದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ‘ಸಾಮರಸ್ಯ ನಡಿಗೆ ಸೌಹಾದತೆಯೆಡೆಗೆ’ ಕಾಲ್ನಡಿಗೆ ಜಾಥಾಕ್ಕೆ ಇಂದು ಬೆಳಗ್ಗೆ ಫರಂಗಿಪೇಟೆಯಲ್ಲಿ ಚಾಲನೆ ಸಿಕ್ಕಿದೆ.

ಚಿತ್ರನಟ ಪ್ರಕಾಶ್ ರೈ, ಮಾಜಿ ಸಚಿವ ಅಮರನಾಥ ಶೆಟ್ಟಿ ಸೇರಿದಂತೆ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು, ನಾಯಕರ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಬಲೂನುಗಳನ್ನು ಹಾರಿಸುವ ಮೂಲಕ ನಡಿಗೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯ ಸಾಮರಸ್ಯಕ್ಕೆ ಕೆಲವರು ಧಕ್ಕೆಯುಂಟು ಮಾಡುತ್ತಿದ್ದಾರೆ. ಆದರೆ, ಶಾಂತಿಯನ್ನು ಕಾಪಾಡುವುದು ಜಾಥಾದ ಉದ್ದೇಶ. ಮಾಣಿಯವರೆಗೆ ಮಾತ್ರವಲ್ಲ, ಜೀವನ‌ ಪರ್ಯಂತ ಜತೆಯಾಗಿ ನಡೆಯೋಣ. ಜನರಿಗೆ, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಜಾಥಾ ಸಾಗಲಿ ಎಂದರು.

ಸಚಿವ ಯು.ಟಿ.ಖಾದರ್, ಶಾಸಕರಾದ ಐವನ್ ಡಿಸೋಜ, ಜೆ.ಆರ್.ಲೋಬೊ, ಕೆ.ಅಭಯಚಂದ್ರ ಜೈನ್, ವಸಂತ ಬಂಗೇರ, ಶಕುಂತಳಾ ಶೆಟ್ಟಿ, ಮಾಜಿ ಸಂಸದ ಇಬ್ರಾಹೀಂ, ಮಾಜಿ ಶಾಸಕ ಸಿಪಿಎಂ ಮುಖಂಡ ಶ್ರೀರಾಮ ರೆಡ್ಡಿ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ ಕಣಚೂರು ಮೋನು, ಸಿಪಿಐ ರಾಜ್ಯ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್, ಮುಖಂಡರಾದ ವಿ.ಕೆ.ಕುಕ್ಯಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಮಮತಾ ಗಟ್ಟಿ, ಪದ್ಮಶೇಖರ ಜೈನ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಜಿ.ಪಂ. ಮಾಜಿ ಸದಸ್ಯ ಉಮರ್ ಫಾರೂಕ್, ಪಿ.ವಿ.ಮೋಹನ್, ಬಿ.ಕೆ.ಇದಿನಬ್ಬ ಕಲ್ಲಡ್ಕ, ವಿವಿಧ ಪಕ್ಷಗಳ ಮುಖಂಡರಾದ ಶೇಖರ್, ಸುನೀಲ್ ಕುಮಾರ್ ಬಜಾಲ್, ರಾಮಣ್ಣ ವಿಟ್ಲ, ಸಂಜೀವ ಬಂಗೇರ, ಬಾಬು ಭಂಡಾರಿ, ಬಿ.ನಾರಾಯಣ, ವಾಸುದೇವ ಬೋಳೂರು, ರಾಜವರ್ಮ ಬಲ್ಲಾಳ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ರೈತ ಸಂಘದ ರವಿಕಿರಣ್ ಪುಣಚ, ಚಂದು ಎಲ್., ಎಂ.ದೇವದಾಸ್, ಶಾಹುಲ್ ಹಮೀದ್‌ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಮಾರಿಪಳ್ಳದಿಂದ ಹಿಂದಿರುಗಿದ ಪ್ರಕಾಶ್ ರೈ:
ಫರಂಗಿಪೇಟೆಯಿಂದ ಹೆಜ್ಜೆ ಹಾಕಿಕೊಂಡು ಬಂದ ನಟ ಪ್ರಕಾಶ್ ರೈ ಅವರು ಮಾರಿಪಳ್ಳ ಜಂಕ್ಷನ್‌ನಲ್ಲಿ ಕಾರು ಹತ್ತಿ ಮಂಗಳೂರಿನತ್ತ ಪ್ರಯಾಣ ಬೆಳೆಸಿದರು.

ಪತ್ರಕರ್ತರಿಗೆ ಪೊಲೀಸರಿಂದ ಅಡ್ಡಿ:
ಪಾದಯಾತ್ರೆ ಆರಂಭಗೊಂಡು ಮುಂದೆ ಸಾಗುತ್ತಿದಂತೆ ಮಾರಿಪಳ್ಳ ಬಳಿ ಕರ್ತವ್ಯದಲ್ಲಿದ್ದ ಪತ್ರಕರ್ತರ ವಾಹನವನ್ನು ತಡೆದ ಎಸ್ಸೈ ಮಂಜುನಾಥ್ ಎಂಬವರು ವಾಹನದ ಕೀಯನ್ನು ಕಸಿದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಯೂ ನಡೆಯಿತು. ಈ ಸಂದರ್ಭದಲ್ಲಿ ಪತ್ರಕರ್ತರು ಎಸ್ಸೈ ಅವರ ವರ್ತನೆಯನ್ನು ಆಕ್ಷೇಪಿಸಿ ತರಾಟೆಗೂ ತೆಗೆದುಕೊಂಡರು. ಈ ವೇಳೆ ಪಾದಯಾತ್ರೆಯಲ್ಲಿ ಬಂದ ಕಾಂಗ್ರೆಸ್ ಮುಖಂಡರು ಮಧ್ಯ ಪ್ರವೇಶಿಸಿ ಸಮಾಧಾನ ಪಡಿಸಿದಾಗ ಕೀಯನ್ನು ವಾಪಸ್ ನೀಡಿ ತೆರಳಿದರು.

ಸಚಿವ ರಮಾನಾಥ ರೈ ಅವರು ಫರಂಗಿಪೇಟೆಯಿಂದ ಮಾಣಿವರೆಗಿನ 24 ಕಿ.ಮೀ. ನಡಿಗೆಯ ಮೂಲಕವೇ ಸಾಗಿದರು. ಉಳಿದವರು ಗುಂಪು-ಗುಂಪಾಗಿ ಹೆಜ್ಜೆ ಹಾಕಿದರು. ಪಾದಯಾತ್ರೆಗೆ ಮುನ್ನ ಫರಂಗಿಪೇಟೆಯಲ್ಲಿ ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಮಿನಿಲಾರಿಯನ್ನು ವೇದಿಕೆಯನ್ನಾಗಿಸಲಾಗಿತ್ತು.

ರಸ್ತೆಯುದ್ದಕ್ಕೂ ಅಲ್ಲಲ್ಲಿ ತಂಪು ಪಾನೀಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಪಾದಯಾತ್ರೆಯಲ್ಲಿ ಸಾಗಿ ಬಂದವರಿಗೆ ಮಧ್ಯಾಹ್ನ ಮೆಲ್ಕಾರ್ ಜಂಕ್ಷನ್ನಲ್ಲಿ ಗಂಜಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅರ್ಧ ತಾಸು ವಿಶ್ರಾಂತಿಯ ಬಳಿಕ ಪಾದಯಾತ್ರೆ ಮುಂದುವರಿಯಿತು.

ಫರಂಗಿಪೇಟೆಯಲ್ಲಿ  ಪ್ರಾರಂಭವಾದ ಕಾಲ್ನಡಿಗೆ ಜಾಥಾ ಸಂಜೆ ಮಾಣಿಯಲ್ಲಿ ಸಮಾಪನಗೊಳ್ಳಲಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News