ವೈಫಲ್ಯ ಮುಚ್ಚಿ ಹಾಕಲು ರೈ ಸಾಮರಸ್ಯ ಯಾತ್ರೆ: ಸಂಸದ ನಳಿನ್ ಆರೋಪ

Update: 2017-12-12 12:20 GMT

ಮಂಗಳೂರು, ಡಿ.12: ಜಿಲ್ಲೆಯ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದು, ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕಲು ಸಾಮರಸ್ಯ ಯಾತ್ರೆಯ ನಾಟಕವಾಡುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರವಾಗಿ ಜಿಲ್ಲೆಯಲ್ಲಿ ಶಾಂತಿ ಕದಡುವ ಯತ್ನಗಳು ನಡೆಯುತ್ತಲೇ ಇವೆ, ಕೊಲೆಗಳು ನಡೆದಿವೆ, ಹಾಗಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವ ಸಚಿವ ರೈ ಸಾಮರಸ್ಯ ಯಾತ್ರೆ ಕೈಬಿಟ್ಟು ತೀರ್ಥಯಾತ್ರೆಗೆ ತೆರಳಲಿ ಎಂದರು.

ಮುಂದಿನ ಚುನಾವಣೆಯಲ್ಲಿ ಸೋಲಿನ ಭೀತಿ ಸಚಿವ ರೈ ಅವರನ್ನು ಕಾಡುತ್ತಿದೆ. ಅದಕ್ಕಾಗಿ ನಡಿಗೆ ನಡೆಸುತ್ತಿದ್ದಾರೆ. ಅವರು ಕೇವಲ ಬಂಟ್ವಾಳಕ್ಕೆ ಮಾತ್ರ ಸಚಿವರಲ್ಲ. ಜಿಲ್ಲೆಯಲ್ಲಿ ಮಂಗಳೂರಿನಿಂದ ಸಂಪಾಜೆ ವರೆಗೆ ಸಾಮರಸ್ಯ ಯಾತ್ರೆ ನಡೆಸಲಿ, ಇಲ್ಲವೇ ಎಷ್ಟು ಕೊಲೆಗಳಾಗಿವೆ, ಸಚಿವರು ಎಷ್ಟು ಮಂದಿ ಕಳ್ಳರು, ದರೋಡೆ ಆರೋಪಿಗಳನ್ನು ಬಿಡಿಸುವಂತೆ ಪೊಲೀಸರಿಗೆ ಫೋನ್ ಮಾಡಿದ್ದೀರಿ ಎನ್ನುವುದು ತನಿಖೆಯಾಗಲಿ ಎಂದು ಹೇಳಿದರು.

ಕೇರಳದಲ್ಲಿ ಕಾಂಗ್ರೆಸ್, ಬಿಜೆಪಿ, ಮುಸ್ಲಿಂ ಲೀಗ್ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಲ್ಲುವ ಆರೋಪವಿರುವ ಸಿಪಿಐಎಂನವರನ್ನು ಸಾಮರಸ್ಯ ಯಾತ್ರೆಯಲ್ಲಿ ರಮಾನಾಥ ರೈ ಸೇರಿಸಿಕೊಂಡಿರುವುದು ಆಕ್ಷೇಪಾರ್ಹ. ಈ ಮೂಲಕ ದಕ್ಷಿಣ ಕನ್ನಡಕ್ಕೂ ದ್ವೇಷ ರಾಜಕಾರಣ ತರುವ ಪ್ರಯತ್ನ ಎಸಗಿದ್ದೀರಿ ಎಂದು ಆರೋಪಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾರ್ಯದರ್ಶಿ ಕಿಶೋರ ರೈ, ಮುಖಂಡರಾದ ಹರೀಶ್ ಪೂಂಜ, ಕ್ಯಾ.ಬೃಜೇಶ್ ಚೌಟ, ನಿತಿನ್ ಕುಮಾರ್, ಹರಿಕೃಷ್ಣ ಬಂಟ್ವಾಳ, ಸುದರ್ಶನ ಮೂಡುಬಿದಿರೆ, ಜೀತೇಂದ್ರ ಕೊಟ್ಟಾರಿ ಹಾಜರಿದ್ದರು.

ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಹಾರ್ಲಿಕ್ಸ್ ಇದ್ದಂತೆ !

ವಿವಿಧ ಹತ್ಯೆಗಳು ನಡೆಯುತ್ತಿರುವುದು ಬಿಜೆಪಿಗೆ ಲಾಭವಾಗಿ ಪರಿಣಮಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಳಿನ್, ಬಿಜೆಪಿ ಸ್ವಂತ ಶಕ್ತಿಯಲ್ಲಿ ನಂಬಿಕೆ ಇರಿಸಿದೆ, ಆದರೆ ಸಿಎಂ ಸಿದ್ದರಾಮಯ್ಯ ನಮಗೆ ಹಾರ್ಲಿಕ್ಸ್ ಇದ್ದಂತೆ ಎಂದೂ ಹೇಳಿದರು.


ಡಿ. 18ರಂದು ಹೊನ್ನಾವರದಲ್ಲಿ ಪ್ರತಿಭಟನೆ

ಶರತ್ ಮಡಿವಾಳ ಕೊಲೆ, ಹೊನ್ನಾವರದ ಪರೇಶ್ ಮೇಸ್ತ ಕೊಲೆ ಪ್ರಕರಣಗಳನ್ನು ಎನ್‌ಐಎ ತನಿಖೆಗಾಗಿ ಆಗ್ರಹಿಸಲಾಗುತ್ತಿದೆ. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಮಾಡಲಾಗುತ್ತಿದೆ. ಲೋಕಸಭೆಯಲ್ಲೂ ವಿಚಾರ ಪ್ರಸ್ತಾಪಿಸಲಾಗುವುದು. ಹೊನ್ನಾವರದಲ್ಲಿ ಡಿ. 18ರಂದು ಪರೇಶ್ ಮೇಸ್ತ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News