ಉಡುಪಿ: 40ನೆ ವಾದಿರಾಜ ಕನಕದಾಸ ಸಂಗೀತೋತ್ಸವ

Update: 2017-12-12 13:46 GMT

ಉಡುಪಿ, ಡಿ.12: ಭಕ್ತಿಯುಗದ ಸಂತಕವಿಗಳಾದ ವಾದಿರಾಜ ಮತ್ತು ಕನಕದಾಸರ ಕೊಡುಗೆಗಳನ್ನು ನೆನಪಿಸಿಕೊಳ್ಳುವ, ‘ವಾದಿರಾಜ ಕನಕದಾಸ ಸಂಗೀತೋತ್ಸವ’ ಹಾಗೂ ವಿಚಾರ ಸಂಕಿರಣ ಡಿ.15 ಮತ್ತು 16ರಂದು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂಜಿಎಂ ಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸತತ 40ನೇ ವರ್ಷದ ಸಂಗೀತೋತ್ಸವದಲ್ಲಿ ‘ವಾದಿರಾಜ ಕನಕದಾಸ ಪ್ರಪಂಚ’ದ ಕುರಿತು ನಡೆಯುವ ವಿಚಾರ ಸಂಕಿರಣ ಈ ಬಾರಿಯ ವಿಶೇಷವಾಗಿದೆ ಎಂದು ಕನಕದಾಸ ಅಧ್ಯಯನ, ಸಂಶೋಧನ ಪೀಠದ ಸಂಯೋಜನಾಧಿಕಾರಿ ಪ್ರೊ. ವರದೇಶ ಹಿರೇಗಂಗೆ ಇಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಡಿ.15ರ ಶುಕ್ರವಾರ ಬೆಳಗ್ಗೆ 9:30ಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ರಿಜಿಸ್ಟ್ರಾರ್ ಡಾ. ನಾರಾಯಣ ಸಭಾಹಿತ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕಲಾ ವಿಮರ್ಶಕ ಎ. ಈಶ್ವರಯ್ಯ ಉಪಸ್ಥಿತರಿರುವರು. ಅಕಾಡೆಮಿ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಂ ಅಧ್ಯಕ್ಷತೆ ವಹಿಸುವರು.

ಬಳಿಕ ನಡೆಯುವ ವಿಚಾರ ಸಂಕಿರಣದಲ್ಲಿ ಉಪನ್ಯಾಸಕರಾಗಿ ಪ್ರೊ.ಕೆ.ಪಿ ರಾವ್(ವಾದಿರಾಜ-ಕನಕದಾಸರ ಕಾಲದ ಸುತ್ತಮುತ್ತ), ಪ್ರೊ.ಉದ್ಯಾವರ ಮಾಧವಾಚಾರ್ಯ(ವಾದಿರಾಜ ಸಾಹಿತ್ಯದ ತಾತ್ವಿಕತೆ), ಡಾ.ಪಾದೇಕಲ್ಲು ವಿಷ್ಣು ಭಟ್ಟ(ಕನಕದಾಸ ಸಾಹಿತ್ಯದ ತಾತ್ವಿಕತೆ), ಪ್ರೊ. ವೀ.ಅರವಿಂದ ಹೆಬ್ಬಾರ್ (ಕರ್ನಾಟಕ ಸಂಗೀತದಲ್ಲಿ ವಾದಿರಾಜ ಕನಕದಾಸರು) ಹಾಗೂ ಟಿ.ರಂಗ ಪೈ (ಹಿಂದೂಸ್ಥಾನಿ ಸಂಗೀತದಲ್ಲಿ ವಾದಿರಾಜ ಕನಕದಾಸರು) ಭಾಗವಹಿಸುವರು.
ಅದೇ ದಿನ ಸಂಜೆ 4:15ಕ್ಕೆ ಸಂಗೀತೋತ್ಸವ ಆರಂಭಗೊಳ್ಳಲಿದ್ದು, ಸಮನ್ವಿ ಮತ್ತು ಅರ್ಚನಾರಿಂದ ಕರ್ನಾಟಕ ಸಂಗೀತ, 6 ಕ್ಕೆ ರವಿಕಿರಣ್ ಮಣಿಪಾಲ ರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮವಿದೆ.

ಡಿ.16ರ  ಬೆಳಗ್ಗೆ 9:30ರಿಂದ ದಿವ್ಯಶ್ರೀಮಣಿಪಾಲರಿಂದ ಕರ್ನಾಟಕ ಸಂಗೀತ, ಮಹಾಬಲೇಶ್ವರ ಭಾಗವತರಿಂದ ಹಿಂದೂಸ್ಥಾನಿ ಸಂಗೀತ, ಅಪರಾಹ್ನ 2:30ರಿಂದ ಉಡುಪಿ ವಾರಿಜಾಕ್ಷಿ ಆರ್.ಎಲ್ ಭಟ್‌ರಿಂದ ಕರ್ನಾಟಕ ಸಂಗೀತ ಸಂಜೆ 4:15ರಿಂದ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಇಲ್ಲಿಯ ವಿದ್ಯಾರ್ಥಿಗಳಿಂದ ವಾದಿರಾಜ ಕನಕದಾಸ ಕೃತಿಗಳ ಗಾಯನ, 5:30ರಿಂದ ಕೆ. ಆರ್. ರಾಘವೇಂದ್ರ ಆಚಾರ್ಯರಿಂದ ವಾದಿರಾಜ ಕನಕದಾಸ ಕೃತಿಗಳ ಗಾಯನ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಹ ಸಂಯೋಜನಾಧಿಕಾರಿ ಡಾ.ಅಶೋಕ ಆಳ್ವ, ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕಿ ಉಮಾ ಉದಯ ಶಂಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News