ಸಂಸ್ಕಾರಯುತ ಶಿಕ್ಷಣದಿಂದ ಶಾಂತಿಯುತ ಸಮಾಜ ನಿರ್ಮಾಣ-ಶಕುಂತಳಾ ಶೆಟ್ಟಿ

Update: 2017-12-12 14:02 GMT

ಪುತ್ತೂರು, ಡಿ. 12: ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಮಹತ್ತರ ಜವಾಬ್ದಾರಿಯನ್ನು ಶಿಕ್ಷಕರು ಹೊಂದಿದಾಗ ಸಮಾಜದಲ್ಲಿ ಶಾಂತಿ ಸಾಮರಸ್ಯದ ವಾತಾವರಣವನ್ನು ನಿರ್ಮಾಣ ಮಾಡಬಹುದು ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕಿ ಹಾಗೂ ರಾಜ್ಯದ ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿರುವ ಶಕುಂತಳಾ ಟಿ ಶೆಟ್ಟಿ ಹೇಳಿದರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜು ಪಾಚಾರ್ಯರ ಸಂಘ ಮತ್ತು ಪುತ್ತೂರು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜ್‌ನ ಸಹಭಾಗಿತ್ವದಲ್ಲಿ ಮಂಗಳವಾರ ಕಾಲೇಜ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ವಜ್ರ ಮಹೋತ್ಸವದ ಅಂಗವಾಗಿ ನಡೆದ ಶೈಕ್ಷಣಿಕ ಕಾರ್ಯಾಗಾರದಲ್ಲಿ ‘ಪ್ರಾಚಾರ್ಯರ ಡೈರಿ-2018’ ಬಿಡುಗಡೆಗೊಳಿಸಿ ಮಾತನಾಡಿದರು.

ನಮ್ಮ ಜಿಲ್ಲೆಯ ಪ್ರಾಚಾರ್ಯರ ಸಂಘವು ಶೈಕ್ಷಣಿಕ ವರ್ಷದಲ್ಲಿ ವಿವಿಧ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವ ಉದ್ದೇಶದಿಂದ ಪ್ರಾಚಾರ್ಯರ ಡೈರಿಯನ್ನು ರೂಪುಗೊಳಿಸಿದ್ದು, ಇದೊಂದು ರಾಜ್ಯದಲ್ಲಿಯೇ ಮಾದರಿಯ ಆದರ್ಶ ಕೆಲಸವಾಗಿದೆ ಎಂದು ಹೇಳಿದರು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದಕ ಜಿಲ್ಲಾ ಉಪನಿರ್ದೇಶಕ ಕೆ ಆರ್ ತಿಮ್ಮಯ್ಯ ಅವರು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯು ವರ್ಷಂಪ್ರತಿ ಉತ್ತಮ ಶೈಕ್ಷಣಿಕ ಫಲಿತಾಂಶವನ್ನು ನೀಡುವ ಮೂಲಕ ರಾಜ್ಯದಲ್ಲಿಯೇ ಉತ್ತಮ ಹೆಸರನ್ನು ಗಳಿಸಿದೆ. ಜಿಲ್ಲೆಯ ಪ್ರಾಚಾರ್ಯರ ಸಂಘವು ಅತ್ಯಂತ ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುವುದರಿಂದ ಉಪನಿರ್ದೇಶಕರ ಜವಾಬ್ದಾರಿ ಬಹಳಷ್ಟು ಕಡಿಮೆಯಾಗಿದೆ ಎಂದರು.

ಪುತ್ತೂರು ಮಾದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ. ಫಾ. ಆಲ್ಫ್ರೆಡ್ ಜೆ ಪಿಂಟೊ ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ರೆ ಡಾ ಆ್ಯಂಟನಿ ಪ್ರಕಾಶ್ ಮೊಂತೆರೊ, ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಉಪಾಧ್ಯಕ್ಷ ದುಗ್ಗಪ್ಪ ಎನ್, ಡಾ ಸಂಗೀತಾ ಎಮ್ ಮತ್ತು ಕೋಶಾಧಿಕಾರಿ ಕೆ.ಎನ್ ಗಂಗಾಧರ ಆಳ್ವ ಉಪಸ್ಥಿತರಿದ್ದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರೆ. ಫಾ. ವಿಜಯ್ ಲೋಬೊ ಸ್ವಾಗತಿಸಿದರು. ಪಾಚಾರ್ಯರ ಸಂಘದ ಅಧ್ಯಕ್ಷೆ ಎಲ್ವೀರಾ ಫಿಲೋಮಿನಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಕಾರ್ಯದರ್ಶಿ ಡಾ ಕಿಶೋರ್ ಕುಮಾರ್ ಶೇಣಿ ವಂದಿಸಿದರು. ಉಪನ್ಯಾಸಕ ಪ್ರಶಾಂತ ಭಟ್ ಪಿ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ಅಂತಾರಾಷ್ಟ್ರೀಯ ಸೃಜನಾಶೀಲ ಕಲಿಕಾ ತರಬೇತಿ ಕೇಂದ್ರದ ಸ್ಥಾಪಕ ಹಾಗೂ ಅಧ್ಯಕ್ಷರಾಗಿರುವ ಡಾ ಗುರುರಾಜ ಕರ್ಜಗಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಎರಡು ತಾಂತ್ರಿಕ ಅಧಿವೇಶನಗಳನ್ನು ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News