ಅಪಘಾತದ ಗಾಯಾಳುಗಳಿಗೆ 'ಉಚಿತ ಚಿಕಿತ್ಸೆ' ಘೋಷಿಸಿದ ಕೇಜ್ರಿವಾಲ್ ಸರಕಾರ

Update: 2017-12-13 09:58 GMT

ಹೊಸದಿಲ್ಲಿ, ಡಿ. 13: ಅಪಘಾತದ ಗಾಯಾಳುಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯೊದಗಿಸುವ ಹೊಸ ಯೋಜನೆಯೊಂದನ್ನು ದಿಲ್ಲಿಯ ಅರವಿಂದ್ ಕೇಜ್ರಿವಾಲ್ ಸರಕಾರ ಘೋಷಿಸಿದೆ. ಎಲ್ಲಾ ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಹಾಗೂ ಅಗ್ನಿ ಅವಘಡ, ಆಸಿಡ್ ದಾಳಿ ಸಂತ್ರಸ್ತರಿಗೆ ಹತ್ತಿರದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಈ ಯೋಜನೆಯಂತೆ ದೊರೆಯಲಿದೆ. ದಿಲ್ಲಿ ಸಚಿವ ಸಂಪುಟ ಈ ಯೋಜನೆಯನ್ನು ಅನುಮೋದಿಸಿದ್ದು ಗಾಯಾಳುಗಳ ಚಿಕಿತ್ಸಾ ವೆಚ್ಚಗಳನ್ನು ಸರಕಾರ ಭರಿಸಲಿದೆ.

ಈ ಯೋಜನೆಯನ್ನು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಪತ್ರಿಕಾ ಗೋಷ್ಠಿಯೊಂದರಲ್ಲಿ ಘೋಷಿಸಿದ್ದಾರೆ. ಈ ಯೋಜನೆಯ ಅನುಮೋದನೆಗಾಗಿ ಅದನ್ನು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರಿಗೆ ಕಳುಹಿಸಲಾಗುವುದು. ಈ ಯೋಜನೆಯ ಲಾಭ ಪಡೆಯಲು ಸಂತ್ರಸ್ತರು ದಿಲ್ಲಿ ನಿವಾಸಿಗಳೇ ಆಗಬೇಕೆಂದೇನಿಲ್ಲ, ಆದರೆ ಅವರು ದಿಲ್ಲಿಯಲ್ಲಿ ನಡೆದ ಅಪಘಾತದಲ್ಲಿ ಗಾಯಾಳುಗಳಾಗಿರಬೇಕು.

ದಿಲ್ಲಿಯಲ್ಲಿ ಪ್ರತಿ ವರ್ಷ ಸರಾಸರಿ 8,000 ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, 15,000ದಿಂದ 20,000 ಜನರು ಗಾಯಾಳುಗಳಾದರೆ ಸುಮಾರು 1,600 ಜನರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಜೈನ್ ಮಾಹಿತಿ ನೀಡಿದ್ದಾರೆ.

ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವವರಿಗೆ ರೂ 2,000 ನಗದು ಬಹುಮಾನ ನೀಡಲಾಗುವುದು ಎಂದು ಕೆಲ ದಿನಗಳ ಹಿಂದೆಯಷ್ಟೇ ಸರಕಾರ ಘೋಷಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News