ಸಮುದ್ರ ವಿಮಾನದಲ್ಲಿ ಪ್ರಯಾಣಿಸಿದ ಮೊದಲಿಗ ಪ್ರಧಾನಿ ಮೋದಿಯೇ?: ಇಲ್ಲಿದೆ ವಾಸ್ತವಾಂಶ

Update: 2017-12-13 10:24 GMT

ಹೊಸದಿಲ್ಲಿ, ಡಿ.13: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಹ್ಮದಾಬಾದ್ ನಗರದ ಸಾಬರಮತಿ ನದಿಯಿಂದ ಮೆಹಸಾನದ ಧರೋಯಿ ಡ್ಯಾಮ್ ತನಕ ಸೀಪ್ಲೇನ್ ನಲ್ಲಿ ಸಂಚರಿಸಿರುವುದು ಭಾರೀ ಸುದ್ದಿಯಾಗಿದೆ. ಪ್ರಧಾನಿಯ ಅಧಿಕೃತ ವೆಬ್ ಸೈಟ್ ನಲ್ಲಿ ‘‘ಭಾರತದ ಪ್ರಥಮ ಸೀಪ್ಲೇನ್ ನಲ್ಲಿ ಪ್ರಧಾನಿ ಮೋದಿ ಪ್ರಪ್ರಥಮ ಪ್ರಯಾಣಿಕ’’ ಎಂಬ ಶೀರ್ಷಿಕೆಯ ಸುದ್ದಿಯೂ ಪ್ರಕಟವಾಗಿತ್ತು. ಬಿಜೆಪಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಹಾಗೂ ಹಲವು ಬಿಜೆಪಿ ನಾಯಕರೂ ಹೀಗೆಯೇ ಹೇಳಿಕೊಂಡರು. ಮಾಧ್ಯಮಗಳೂ ಅಂತೆಯೇ ಹೇಳಿಕೊಂಡವು. ಆದರೆ ಈ ಶೀರ್ಷಿಕೆಯನ್ನು ನಂತರ ಬದಲಾಯಿಸಲಾಯಿತು.

ಆಲ್ಟ್ ನ್ಯೂಸ್ ಈ ವಿಚಾರದ ಬಗ್ಗೆ ಕುತೂಹಲದಿಂದ ಪರಾಮರ್ಶಿಸಿದಾಗ ಭಾರತದ ಪ್ರಪ್ರಥಮ ವಾಣಿಜ್ಯ ಸೀಪ್ಲೇನ್ ಸೇವೆ 2010ರಲ್ಲಿ ಆರಂಭಿಸಲಾಗಿತ್ತೆಂದು ತಿಳಿದು ಬಂದಿತ್ತು. ಆ ವರ್ಷದ ಡಿಸೆಂಬರ್ ನಲ್ಲಿ ಸಾರ್ವಜನಿಕ ರಂಗದ ಹೆಲಿಕಾಪ್ಟರ್ ಸೇವಾ ಪೂರೈಕೆದಾರ ಪವನ್ ಹಂಸ್ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಆಡಳಿತದ ಜಂಟಿ ಸಹಯೋಗದಲ್ಲಿ ಈ ಸೇವೆ ಆರಂಭಿಸಲಾಗಿತ್ತು. ಆ ಸಮಯ ನಾಗರಿಕ ವಿಮಾನಯಾನ ಖಾತೆ ಸಚಿವರಾಗಿದ್ದ ಪ್ರಫುಲ್ ಪಟೇಲ್ ಕೂಡ ಇದನ್ನು ದೃಢೀಕರಿಸಿದ್ದಾರೆ. ಜಲ್ ಹಂಸ್ ಸೇವೆಯನ್ನು ನಂತರ ಸ್ಥಗಿತಗೊಳಿಸಲಾಗಿತ್ತು.

ಜೂನ್ 2013ರಲ್ಲಿ ಕೇರಳ ಸರಕಾರ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಸೀಪ್ಲೇನ್ ಸೇವೆ ಆರಂಭಿಸಿತ್ತು. ಆದರೆ ಸ್ಥಳೀಯ ಮೀನುಗಾರರ ವಿರೋಧದಿಂದಾಗಿ ಅದು ಕೂಡ ಸ್ಥಗಿತಗೊಂಡಿತ್ತು. ಈ ಸಮಯ ಕೇರಳದಲ್ಲಿ ಉಮ್ಮನ್ ಚಾಂಡಿ ಮುಖ್ಯಮಂತ್ರಿಯಾಗಿದ್ದರು. ಅವರು ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದರು.

ಖಾಸಗಿ ಸಂಸ್ಥೆಗಳೂ ಸೀಪ್ಲೇನ್ ಸೇವೆಗಳನ್ನು ನೀಡಲು ಮುಂದೆ ಬಂದಿದ್ದವು. 2012ರಲ್ಲಿ ಸೀಬರ್ಡ್ ಸೀಪ್ಲೇನ್ ಪ್ರೈ. ಲಿ. ಎಂಬ ಸಂಸ್ಥೆ ಈ ಸೇವೆಯನ್ನು ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಆರಂಭಿಸಿತ್ತು. ಮೆಹೈರ್ ಎಂಬ ಸಂಸ್ಥೆ 2011ರಲ್ಲಿ ಅಂಡಮಾನ್ ನಿಕೋಬಾರ್ ದ್ವೀಪ ಹಾಗೂ ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಸೀಪ್ಲೇನ್ ಸೇವೆಯೊದಗಿಸಿತ್ತು. ಆದರೆ ವಿವಿಧ ಕಾರಣಗಳಿಂದ ನಂತರ ಈ ಸೇವೆ ಸ್ಥಗಿತಗೊಳಿಸಲಾಗಿತ್ತು.

ಇತ್ತೀಚೆಗೆ ಡಿಸೆಂಬರ್ 9ರಂದು ಸ್ಪೈಸ್ ಜೆಟ್ ಸೀ ಟ್ರಯಲ್ ಗಳನ್ನು ಮುಂಬೈಯ ಚೌಪಾಟಿಯಲ್ಲಿ ನಡೆಸಿತ್ತು. ಆಗ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಅಶೋಕ್ ಗಜಪತಿರಾಜು ಹಾಜರಿದ್ದರು. ಸ್ಪೈಸ್ ಜೆಟ್ 100 ಎಂಫಿಬಿಯನ್ ವಿಮಾನಗಳನ್ನು ಈ ಉದ್ದೇಶಕ್ಕೆ ಖರೀದಿಸುವ ಯೋಜನೆ ಹೊಂದಿದೆ. ಗಡ್ಕರಿ ಉಪಯೋಗಿಸಿದ ಸೀಪ್ಲೇನ್ ಅನ್ನೇ ಪ್ರಧಾನಿ ಉಪಯೋಗಿಸಿದ್ದರು. ಅದರ ನೋಂದಣಿ ಸಂಖ್ಯೆ ಎನ್181ಕೆಕ್ಯು ಇದನ್ನು ದೃಢೀಕರಿಸುತ್ತದೆ.

ಈ ಸೀಪ್ಲೇನ್ ಮುಂಬೈಗೆ ಪಾಕಿಸ್ತಾನದ ಕರಾಚಿ ಮೂಲಕ ಡಿ.3ರಂದು ಆಗಮಿಸಿತ್ತು. ಕಳೆದ 90 ದಿನಗಳಲ್ಲಿ ಅದು ಗ್ರೀಸ್, ಸೌದಿ ಅರೇಬಿಯಾ ಹಾಗೂ ನ್ಯೂಜಿಲೆಂಡಿಗೆ ಪ್ರಯಾಣಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News