ಬಲವಂತದಿಂದ ಮದುವೆಯಾದ ಬಾಲಕ ಆತ್ಮಹತ್ಯೆ

Update: 2017-12-13 14:18 GMT

ಪಾಟ್ನಾ,ಡಿ.13: ಬಂಧುಗಳು ಮತ್ತು ಗ್ರಾಮಸ್ಥರ ಬಲವಂತದಿಂದ ತನಗಿಂತಲೂ 10 ವರ್ಷ ಹಿರಿಯಳಾದ ವಿಧವೆ ಅತ್ತಿಗೆಯನ್ನು ಮದುವೆಯಾಗಿದ್ದ 15ರ ಹರೆಯದ ಬಾಲಕನೋರ್ವ ಎರಡೇ ಗಂಟೆಗಳಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ರಾಜ್ಯದ ಗಯಾ ಜಿಲ್ಲೆಯ ಪರೈಯಾ ಪೊಲೀಸ್ ಠಾಣಾ ವ್ಯಾಪ್ತಿಯ ವಿನೋಬಾ ನಗರ ಗ್ರಾಮದಲ್ಲಿ ನಡೆದಿದೆ.

ಪರೈಯಾದ ಸರಕಾರಿ ಪ್ರೌಢಶಾಲೆಯಲ್ಲಿ ಒಂಭತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ ಮಹಾದೇವ ದಾಸ್ ಮತ್ತು ಇಬ್ಬರು ಮಕ್ಕಳ ತಾಯಿಯಾಗಿರುವ ಆತನ ಮೃತ ಹಿರಿಯ ಸೋದರನ ಪತ್ನಿ ರುಬಿ ದೇವಿ(25) ಅವರ ಮದುವೆಯು ಸೋಮವಾರ ಗ್ರಾಮದ ದೇವಸ್ಥಾನದಲ್ಲಿ ಬಂಧುಗಳು ಮತ್ತು ಗ್ರಾಮಸ್ಥರ ಉಪಸ್ಥಿತಿಯಲ್ಲಿ ನಡೆದಿತ್ತು. ವರನ ಕಡೆಯ ನಾಲ್ವರು ಮತ್ತು ವಧುವಿನ ಕಡೆಯ ಆರು ಜನರು ಮದುವೆಯ ದಾಖಲೆಗೆ ಸಹಿ ಹಾಕಿದ್ದರು. ಮದುವೆ ನಡೆದ ಬೆನ್ನಿಗೇ ಮನೆಗೆ ಮರಳಿದ್ದ ಮಹಾದೇವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.

ತನ್ನನ್ನು ಸ್ವಂತ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದ ಮಹಿಳೆಯೊಂದಿಗಿನ ಮದುವೆ ಯಿಂದಾಗಿ ಮಹಾದೇವ ಅಸಂತುಷ್ಟನಾಗಿದ್ದ ಎಂದು ಹೇಳಿದ ತಂದೆ ಚಂದ್ರೇಶ್ವರ ದಾಸ್, ತನ್ನ ಹಿರಿಯ ಮಗನ ಸಾವಿಗೆ ಪರಿಹಾರವಾಗಿ ತಾನು ಸ್ವೀಕರಿಸಿದ್ದ 80,000 ರೂ.ಗಳ ಪರಿಹಾರದಿಂದಾಗಿ ತನ್ನ ಇನ್ನೊಬ್ಬ ಮಗನನ್ನೂ ಕಳೆದುಕೊಳ್ಳು ವಂತಾಯಿತು ಎಂದು ಹೇಳಿದರು.

ಗಯಾದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರೇಶ್ವರರ ಹಿರಿಯ ಪುತ್ರ 2013ರಲ್ಲಿ ವಿದ್ಯುದಾಘಾತದಿಂದ ಮೃತಪಟ್ಟಿದ್ದ. ಪರಿಹಾರದ ಹಣವು ಚಂದ್ರೇಶ್ವರರ ಬ್ಯಾಂಕ ಖಾತೆಗೆ ಜಮಾ ಆಗಿದ್ದು, ಅದನ್ನು ರುಬಿಯ ಖಾತೆಗೆ ವರ್ಗಾಯಿಸುವಂತೆ ಆಕೆ ಮತ್ತು ತಂದೆ-ತಾಯಿ ಒತ್ತಾಯಿಸುತ್ತಿದ್ದರು. 27,000 ರೂ.ಗಳನ್ನು ಸೊಸೆಯ ಖಾತೆಗೆ ಹಾಕಿದ್ದ ಚಂದ್ರೇಶ್ವರ ಉಳಿದ ಹಣವನ್ನು ಶೀಘ್ರವೇ ವರ್ಗಾಯಿಸುವುದಾಗಿ ಭರವಸೆ ನೀಡಿದ್ದರು. ಆದರೆ ಹಣವನ್ನು ತಕ್ಷಣವೇ ವರ್ಗಾಯಿಸುವಂತೆ ಅಥವಾ ಮಹಾದೇವನ ಜೊತೆ ರುಬಿಯ ಮದುವೆ ಮಾಡುವಂತೆ ಆಕೆಯ ಹೆತ್ತವರು ಪಟ್ಟು ಹಿಡಿದಿದ್ದರು.

ಬಾಲವಿವಾಹ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಮದುವೆಯಲ್ಲಿ ಭಾಗಿಯಾಗಿದ್ದ ಒಂಭತ್ತು ಜನರನ್ನು ಆರೋಪಿಗಳನ್ನಾಗಿ ಹೆಸರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News