ಸಂಸತ್‌ ದಾಳಿ ಹುತಾತ್ಮರಿಗೆ ಶ್ರದ್ಧಾಂಜಲಿ

Update: 2017-12-13 14:24 GMT

ಹೊಸದಿಲ್ಲಿ, ಡಿ.13: 2001ರಲ್ಲಿ ಸಂಸತ್‌ನ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಪಾರ್ಲಿಮೆಂಟ್ ಭವನದ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮುಂತಾದ ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್, ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಹಿರಿಯ ಸಚಿವರು ಹಾಗೂ ರಾಜಕೀಯ ಮುಖಂಡರು ಪುಷ್ಪಾಂಜಲಿ ಸಲ್ಲಿಸಿದರು.

ಕಾರ್ಯಕ್ರಮದ ಸಂದರ್ಭ ಪರಸ್ಪರ ಮುಖಾಮುಖಿಯಾದಾಗ ಮನಮೋಹನ್ ಸಿಂಗ್ ‘ನಮಸ್ತೆ’ ಎಂದು ಮೋದಿಯವರನ್ನು ಸ್ವಾಗತಿಸಿದರೆ, ಮೋದಿ ಮಾಜಿ ಪ್ರಧಾನಿಯವರಿಗೆ ಹಸ್ತಲಾಘವ ನೀಡಿ ಪ್ರತಿವಂದಿಸಿದರು.

ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ತಿನ ರಕ್ಷಣೆಗಾಗಿ ತಮ್ಮ ಜೀವವನ್ನೇ ಬಲಿದಾನಗೈದವ ಹುತಾತ್ಮರಿಗೆ ದೇಶವು ಎಂದೆಂದಿಗೂ ಆಭಾರಿಯಾಗಿರುತ್ತದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.

 ಪ್ರಜಾಪ್ರಭುತ್ವದ ದೇಗುಲವನ್ನು ದಾಳಿಕೋರರಿಂದ ರಕ್ಷಿಸುವ ಕಾರ್ಯದಲ್ಲಿ ಜೀವವನ್ನೇ ಬಲಿಗೊಟ್ಟ ಹುತಾತ್ಮರ ತ್ಯಾಗ ಎಂದಿಗೂ ಸ್ಮರಣಾರ್ಹವಾಗಿರುತ್ತದೆ ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಕೇಂದ್ರ ಸಚಿವರಾದ ಸ್ಮತಿ ಇರಾನಿ ಹಾಗೂ ರಾಜ್ಯವರ್ಧನ್ ಸಿಂಗ್ ರಾಥೋರ್ ಕೂಡಾ ಹುತಾತ್ಮರ ಬಲಿದಾನವನ್ನು ಸ್ಮರಿಸಿಕೊಂಡಿದ್ದಾರೆ.

  2001ರ ಡಿ.13ರಂದು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜಿತರಾಗಿದ್ದ ಐವರು ಭಯೋತ್ಪಾದಕರು ಸಂಸತ್ತಿನ ಆವರಣದೊಳಗೆ ನುಸುಳಿ ಮನಬಂದಂತೆ ಗುಂಡು ಹಾರಿಸಿದಾಗ ಐವರು ಪೊಲೀಸರು, ಸಿಆರ್‌ಪಿಎಫ್‌ನ ಮಹಿಳಾ ಅಧಿಕಾರಿ, ಸಂಸತ್ತಿನ ಇಬ್ಬರು ಭದ್ರತಾ ಸಿಬ್ಬಂದಿ, ಓರ್ವ ಮಾಲಿ, ಹಾಗೂ ಓರ್ವ ಕ್ಯಾಮೆರಾಮನ್ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News