ನಾಗಾಲ್ಯಾಂಡ್‌ ಜನರಿಗೆ 10 ರೂ. ನಾಣ್ಯ ಕೂಡ ‘ಅಮಾನ್ಯ’

Update: 2017-12-13 16:50 GMT

ಕೋಹಿಮಾ, ಡಿ. 13: ಹತ್ತು ರೂ. ನಾಣ್ಯವನ್ನು ನಿಷೇಧಿಸಿಲ್ಲ ಎಂದು ಆರ್‌ಬಿಐ ನಿಯಮಿತವಾಗಿ ಸ್ಪಷ್ಟನೆ ನೀಡುತ್ತಿದ್ದರೂ ನಾಗಾಲ್ಯಾಂಡ್‌ನ ಜನರು, ಮುಖ್ಯವಾಗಿ ಸಣ್ಣ ವ್ಯಾಪಾರಿಗಳು 10 ರೂ. ನಾಣ್ಯಗಳನ್ನು ನಿರಾಕರಿಸುತ್ತಿದ್ದಾರೆ.

 10 ರೂ. ನಾಣ್ಯ ಸ್ವೀಕರಿಸಲು ಬಯಸದ ಅಂಗಡಿಯವರೊಬ್ಬರು, ಗ್ರಾಹಕರು 10 ರೂ. ನಾಣ್ಯ ಸ್ವೀಕರಿಸುತ್ತಿಲ್ಲ ಎಂದಿದ್ದಾರೆ. 10 ರೂ. ನಾಣ್ಯ ಚಲಾವಣೆಯಲ್ಲಿ ಇದೆ ಎಂಬ ಅರಿವು ಹಲವರಿಗೆ ಇದೆ. ಆದರೆ, ಮಾರುಕಟ್ಟೆಯಲ್ಲಿ ಮುಖ್ಯವಾಗಿ ಸಣ್ಣ ವ್ಯಾಪಾರಸ್ಥರಿಗೆ ಈ ನಾಣ್ಯದ ಬಗ್ಗೆ ಸಂಶಯ ಇದೆ.

 ರಾಜ್ಯದ ವಾಣಿಜ್ಯ ರಾಜಧಾನಿಯಾಗಿರುವ ಧೀಮಾಪುರದ ಅಂಗಡಿ ವ್ಯಾಪಾರಿ ಟೆಮ್ಸುಟುಲಾ ಗ್ರಾಹಕನೋರ್ವ ನೀಡಿದ 10 ರೂ. ನಾಣ್ಯವನ್ನು ಹಿಂದಿರುಗಿಸಿ ‘ಇದು ಚಲಾವಣೆಯಲ್ಲಿ ಇಲ್ಲ’ ಎಂದು ಹೇಳಿದ್ದಾರೆ. ‘ಈ ನಾಣ್ಯ ಚಲಾವಣೆಯಲ್ಲಿದೆ’ ಎಂದು ಗ್ರಾಹಕ ತಿಳಿಸಿದಾಗ ಟೆಮ್ಸುಟುಲಾ, ‘ಗ್ರಾಹಕರು ಸ್ವೀಕರಿಸುತ್ತಿಲ್ಲ. ನಾನೇನು ಮಾಡಲಿ’ ಎಂದಿದ್ದಾರೆ. ಇನ್ನೋರ್ವ ಅಂಗಡಿ ವ್ಯಾಪಾರಿ ಸುಮಿತ್ ಪ್ರತಿಕ್ರಿಯಿಸಿ, ‘10 ರೂ. ನಾಣ್ಯವನ್ನು ಗ್ರಾಹಕರು ಸ್ವೀಕರಿಸುತ್ತಿಲ್ಲ. ಆದುದರಿಂದ ಅಂಗಡಿಯವರು ಸ್ವೀಕರಿಸುತ್ತಿಲ್ಲ’ ಎಂದು ಹೇಳಿದ್ದಾರೆ. 10 ರೂ. ನಾಣ್ಯವನ್ನು ನಿಷೇಧಿಸಿಲ್ಲ ಎಂದು ನಿಮಗೆ ಗೊತ್ತಿದೆಯೇ? ಎಂದು ಪ್ರಶ್ನಿಸಿದಾಗ, ಸುಮಿತ್ ‘ನನಗೆ ಗೊತ್ತು. ಆದರೆ, ಜನರಿಗೆ ಗೊತ್ತಾಗಬೇಕಲ್ಲ’ ಎಂದು ತಿಳಿಸಿದ್ದಾರೆ.

ನಾಗಾಲ್ಯಾಂಡ್‌ನ ಬ್ಯಾಂಕ್‌ನಲ್ಲಿ 10 ರೂ. ನಾಣ್ಯವನ್ನು ದೊಡ್ಡ ಪ್ರಮಾಣದಲ್ಲಿ ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಕಡಿಮೆ ವೌಲ್ಯದ ನಾಣ್ಯ ಹಾಗೂ ನೋಟುಗಳು ಬ್ಯಾಂಕ್‌ನಲ್ಲಿ ಠೇವಣಿಯಲ್ಲಿರುವುದಕ್ಕಿಂತ ಚಲಾವಣೆಯಲ್ಲಿ ಇರಬೇಕು ಎಂದು ಹೇಳಿದೆ. ‘ನನ್ನಲ್ಲಿ 3 ಸಾವಿರ ರೂಪಾಯಿಯ 10 ರೂ. ನಾಣ್ಯಗಳು ಇದ್ದುವು. ಬ್ಯಾಂಕ್‌ನಲ್ಲಿ ಠೇವಣಿ ಇರಿಸಲು ನಾನು ಕಳುಹಿಸಿದೆ’. ಆದರೆ, ‘ನಾಣ್ಯಗಳು ಚಲಾವಣೆಯಲ್ಲಿ ಇರಬೇಕು ’ ಎಂದು ಹೇಳಿ ಬ್ಯಾಂಕ್‌ನವರು ಹಿಂದೆ ಕಳುಹಿಸಿದರು ಎಂದು ಡಿಸ್ ಕೇಬಲ್ ನೆಟ್‌ವರ್ಕ್‌ನ ಮ್ಯಾನೇಜರ್ ಧಾರ್ ಹೇಳಿದ್ದಾರೆ.

 ಈ ನಡುವೆ ಕೆಲವು ರಾಜ್ಯಗಳಲ್ಲಿ ಲಾಂಛನ ಇಲ್ಲದ 10 ರೂ. ನಾಣ್ಯ ನಕಲಿ ಎಂಬ ವದಂತಿ ಹರಡಿದೆ. ನಾಗಾಲ್ಯಾಂಡ್‌ನಲ್ಲಿ ಲಾಂಛನ ಇರಲಿ, ಇಲ್ಲದೇ ಇರಲಿ 10 ರೂ. ನಾಣ್ಯವನ್ನು ಯಾರೂ ಸ್ವೀಕರಿಸುತ್ತಿಲ್ಲ. ಆದರೂ ಈ ಬಗ್ಗೆ ಸಂಬಂಧಿತರು ವದಂತಿ ನಿವಾರಿಸಲು ಪ್ರಯತ್ನಿಸುತ್ತಿಲ್ಲ.

ಲಾಂಛನ ಇದ್ದರೂ ಇರದಿದ್ದರೂ 10 ರೂ. ನಾಣ್ಯ ಕಾನೂನು ಬದ್ಧ ನಾಣ್ಯ ಎಂದು ಆರ್‌ಬಿಐ ಹೇಳುತ್ತಾ ಬಂದಿದೆ. ಕಾನೂನು ಬದ್ಧ ಯಾವುದೇ ನಾಣ್ಯವನ್ನು ನಿರಾಕರಿಸುವುದು ಕ್ರಿಮಿನಲ್ ಅಪರಾಧ. ಇದಕ್ಕೆ ಕಾನೂನಿನ ಕ್ರಮ ತೆಗೆದುಕೊಳ್ಳುವ ಅವಕಾಶ ಇದೆ ಎಂದು ಆರ್‌ಬಿಐ ಹೇಳಿದೆ. ಆದರೆ, ಈ ಮಾಹಿತಿ ಮಾತ್ರ ಜನರಿಗೆ ತಲುಪುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News