ರಾಹುಲ್ ಗಾಂಧಿಯ ಸಂದರ್ಶನ ಪ್ರಸಾರ ಮಾಡಿದ್ದಕ್ಕೆ ಬಿಜೆಪಿಯಿಂದ ಪತ್ರಕರ್ತರಿಗೆ ಬೆದರಿಕೆ: ಕಾಂಗ್ರೆಸ್ ಆರೋಪ

Update: 2017-12-13 17:00 GMT

ಹೊಸದಿಲ್ಲಿ, ಡಿ.13: ಕಾಂಗ್ರೆಸ್‌ನ ನೂತನ ಅಧ್ಯಕ್ಷ ರಾಹುಲ್ ಗಾಂಧಿಯವರ ಸಂದರ್ಶನವನ್ನು ಪ್ರಸಾರ ಮಾಡಿದ್ದಕ್ಕಾಗಿ ಗುಜರಾತ್‌ನ ಪತ್ರಕರ್ತರಿಗೆ ಬಿಜೆಪಿ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿ ಬುಧವಾರದಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಕೆಲವು ಪತ್ರಕರ್ತರಿಗೆ ಬಿಜೆಪಿಯ ಹಿರಿಯ ನಾಯಕರಿಂದ ಬೆದರಿಕೆಗಳು ಬಂದಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಬೆದರಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.

ಈ ಬಗ್ಗೆ ಗಮನ ನೀಡುವಂತೆ ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ. ಯಾವ ಕ್ರಿಯೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂಬುದನ್ನು ಚುನಾವಣಾ ಆಯೋಗ ಮಾತ್ರ ನಿರ್ಧರಿಸಬೇಕು ಎಂದು ಅವರು ತಿಳಿಸಿದ್ದಾರೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆಗೆ ಒಂದು ದಿನ ಮೊದಲು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಅದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಲ್ಲದಿದ್ದರೆ ರಾಹುಲ್ ಗಾಂಧಿಯವರ ಸಂದರ್ಶನ ಹೇಗೆ ಉಲ್ಲಂಘನೆಯಾಗುತ್ತದೆ ಎಂದು ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

 ಕೆಲವು ಸ್ಥಳೀಯ ಚಾನೆಲ್‌ಗಳು ಬುಧವಾರದಂದು ರಾಹುಲ್ ಗಾಂಧಿಯ ಸಂದರ್ಶನವನ್ನು ಪ್ರಸಾರ ಮಾಡಿದ್ದವು. ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಡಿ.14 ಗುರುವಾರದಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News