'ಒಲಿಂಪಿಕ್ಸ್ ಚಿನ್ನ ನನ್ನ ಅಂತಿಮ ಗುರಿ'

Update: 2017-12-13 18:16 GMT

ಹೊಸದಿಲ್ಲಿ, ಡಿ.13: ಮಹಿಳಾ ಬಾಕ್ಸಿಂಗ್‌ನಲ್ಲಿ ಹೆಚ್ಚಿನ ಎಲ್ಲವನ್ನೂ ಸಾಧಿಸಿರುವ, ಐದು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸುವ ಗುರಿ ಹಾಕಿಕೊಂಡಿದ್ದಾರೆ.

ಮೇರಿ 2012ರಲ್ಲಿ ಲಂಡನ್‌ನಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಲಂಡನ್ ಗೇಮ್ಸ್‌ನಲ್ಲಿ ಮೊದಲ ಬಾರಿ ಮಹಿಳಾ ಬಾಕ್ಸಿಂಗ್‌ನ್ನು ಪರಿಚಯಿಸಲಾಗಿತ್ತು. ಲಂಡನ್ ಒಲಿಂಪಿಕ್ಸ್‌ನಲ್ಲಿ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೇರಿ ಕಂಚು ಜಯಿಸಿದ್ದರು.

48 ಕೆಜಿ ತೂಕ ವಿಭಾಗದಲ್ಲಿ 5 ಬಾರಿ ವಿಶ್ವ ಚಾಂಪಿಯನ್‌ಶಿಪ್ ಜಯಿಸಿದ್ದ ಮೇರಿಗೆ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವಾಗ ಸವಾಲು ಎದುರಾಗಿತ್ತು. ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಮುಂದಿನ ವರ್ಷದ ಏಷ್ಯನ್ ಗೇಮ್ಸ್ ಹಾಗೂ 2020ರ ಒಲಿಂಪಿಕ್ಸ್‌ನಲ್ಲಿ 48 ಕೆಜಿ ತೂಕ ವಿಭಾಗವನ್ನು ಸೇರ್ಪಡೆಗೊಳಿಸುವ ಸಂಬಂಧ ಚರ್ಚೆ ನಡೆಸುತ್ತಿದೆ.

''ನಾನು ಈತನಕ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿಲ್ಲ. ಚಿನ್ನ ಜಯಿಸುವುದು ನನ್ನ ಅಂತಿಮ ಗುರಿ. 2020ರ ಒಲಿಂಪಿಕ್ಸ್‌ನ್ನು ಮನಸ್ಸಿನಲ್ಲಿಟ್ಟುಕೊಂಡು ಕಠಿಣ ಶ್ರಮಪಡುತ್ತಿದ್ದೇನೆ. ಶಕ್ತಿಮೀರಿ ಶ್ರಮಿಸುವೆ. ನಾನು ಜೀವಂತವಿರುವ ತನಕ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ನನ್ನ ಕನಸಾಗಿರುತ್ತದೆ. ನನ್ನ ವೃತ್ತಿಜೀವನದ ಕೊನೆ ತನಕ ಗುರಿಯಾಗಿ ಉಳಿಯುತ್ತದೆ'' ಎಂದು ಮಣಿಪುರದ ಬಾಕ್ಸರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News